ಸೋಮವಾರಪೇಟೆ: ಎಲ್ಲರೂ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡಲ್ಲಿ ಮಾತ್ರ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಾಧ್ಯ ಎಂದು ತಹಶೀಲ್ದಾರ್ ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಶಾಂತಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ನಡೆದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಆರೋಗ್ಯ ಪ್ರಮುಖವಾಗಿದ್ದು, ಆರೋಗ್ಯದತ್ತ ಎಲ್ಲರೂ ಗಮನ ಹರಿಸಬೇಕೆಂದರು.
ಶಾಂತಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂದರ್ಭ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಇದರೊಂದಿಗೆ ರಕ್ತದಾನದ ಮೂಲಕ ಮತ್ತೊಂದು ಜೀವ ಉಳಿಸುವ ಮಹತ್ಕಾರ್ಯವನ್ನೂ ಹಮ್ಮಿಕೊಂಡಿರುವುದು ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಮಂಜೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇದ್ದರೂ ಮಕ್ಕಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ. ಸ್ಥಳೀಯ ಪೋಷಕರು ಶಾಲೆಗಳ ಉಳಿವಿಗೆ ಕೈಜೋಡಿಸಬೇಕು. ಶಾಂತಳ್ಳಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿದರೆ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಧನಂಜಯ್ ಮೇದಪ್ಪ ಮಾತನಾಡಿ, ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಶಿಬಿರಗಳನ್ನು ಆಯೋಜನೆ ಮಾಡುವುದರಿಂದ ರೋಗಗಳ ತ್ವರಿತ ಪತ್ತೆ ಮತ್ತು ಮುಂಜಾಗ್ರತೆ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸ್ಥಳೀಯವಾಗಿ ಜನರ ಆರೋಗ್ಯ ತಪಾಸಣೆ ನಡೆಸಿ, ಆರಂಭದಲ್ಲಿಯೇ ಸೂಕ್ತ ಸಲಹೆ ನೀಡಿದರೆ ಮುಂದೆ ಗಂಭೀರ ಪರಿಣಾಮಗಳಿಂದ ದೂರವಿರಬಹುದು. ಇದರೊಂದಿಗೆ ದೊಡ್ಡ ಆಸ್ಪತ್ರೆಗಳಿಗೆ ಒತ್ತಡಗಳೂ ಕಡಿಮೆಯಾಗುತ್ತವೆ. ಜನರ ಸಮಯ ಹಾಗೂ ಹಣವೂ ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಶಾಂತಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಜಿ. ಮೇದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಮಡಿಕೇರಿ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಖಜಾಂಚಿ ರಾಜಶೇಖರ್, ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ್, ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಉಪ ತಹಶೀಲ್ದಾರ್ ತುಕ್ರಪ್ಪ ಮೇರ, ಕಂದಾಯಾಧಿಕಾರಿ ದಾಮೋಧರ್, ಪಿಡಿಒ ವೇಣುಗೋಪಾಲ್, ಗ್ರಾಮಾಧ್ಯಕ್ಷ ಜಿ.ಡಿ. ಬಸವರಾಜು, ಯುವಕ ಸಂಘದ ಅಧ್ಯಕ್ಷ ಸಜನ್ ಮಂದಣ್ಣ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 365 ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಸಲಹೆ ಪಡೆದರು. 34 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು. ಇದೇ ಸಂದರ್ಭ ಶಾಲೆಯ ಹಿರಿಯ ಶಿಕ್ಷಕರು, ಸಾಧಕರು, ವೈದ್ಯರುಗಳನ್ನು ಶತಮಾನೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.