
ಮಡಿಕೇರಿ: ತಾಲ್ಲೂಕಿನ ಮೂರ್ನಾಡು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು.
ರೋಟರಿ ವುಡ್ಸ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಮೂರ್ನಾಡು ಗ್ರಾಮಪಂಚಾಯಿತಿ ಮತ್ತು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ನಡೆದ ಈ ಶಿಬಿರದಲ್ಲಿ ಒಟ್ಟು 72 ಮಂದಿ ಭಾಗಿಯಾದರು.
ಶಿಬಿರ ಉದ್ಘಾಟಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್, ‘ರೋಗ ಬಂದಾಗ ಮಾತ್ರ ಆಸ್ಪತ್ರೆಗೆ ಹೋಗುವ ಮನೋಭಾವ ಬಿಟ್ಟು, ಆಗಿಂದಾಗ್ಗೆ ಆರೋಗ್ಯ ತಪಾಸಣೆ ಕೈಗೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ದೇವರು ಕೊಟ್ಟಿರುವ ಮಹತ್ವದ ವರವಾಗಿರುವ ಮನುಷ್ಯ ಜನ್ಮವನ್ನು ಸಾಥ೯ಕಗೊಳಿಸಲು ಉತ್ತಮ ಆರೋಗ್ಯ ಕಾಳಜಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್ ಹೇಳಿದ್ದಾರೆ.
ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಟನಾ ಕಾರ್ಯದರ್ಶಿ, ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ‘ಕ್ಯಾನ್ಸರ್ ಬಂದರೂ ಜೀವನ ಸೋಲುವುದಿಲ್ಲ ಎಂಬ ಸಂದೇಶವನ್ನು ಎಲ್ಲೆಡೆ ವ್ಯಾಪಿಸಲು ಪ್ರತಿಯೊಬ್ಬರೂ ಮುಂದಾದಲ್ಲಿ ಕ್ಯಾನ್ಸರ್ ಪೀಡಿತರಿಗೆ ಆತ್ಮಸ್ಥೆಯ೯ ತುಂಬಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಕ್ಷಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘225 ದೇಶಗಳಲ್ಲಿನ 45 ಸಾವಿರ ರೋಟರಿ ಸಂಸ್ಥೆಗಳು ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಸಮಾರೋಪಾದಿಯಲ್ಲಿ ಹಮ್ಮಿಕೊಂಡಿದೆ’ ಎಂದರು.
ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ, ಕಾಂತೂರು ಮೂರ್ನಾಡು ಗ್ರಾಮಪಂಚಾಯಿತಿ ಅಧ್ಯಕ್ಷ ಕುಶನ್ ರೈ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಿರ್ದೇಶಕ ವಸಂತ್ ಕುಮಾರ್, ಶಿಬಿರ ಸಂಚಾಲಕ ಚಂದ್ರಶೇಖರ್, ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ರೆಜಿಲ್ ರಜನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.