ಮಡಿಕೇರಿ: ಕೊಡಗು ಜಿಲ್ಲೆಯ ಅತಿ ದೊಡ್ಡ ಜ್ವಲಂತ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತದ್ದು ವನ್ಯಜೀವಿ– ಮಾನವ ಸಂಘರ್ಷ. ಪ್ರತಿ ವರ್ಷವೂ ಇದು ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಸದಾ ಭಯದಲ್ಲೇ ಬದುಕುವಂತಾಗಿದೆ.
ನಿತ್ಯ ಜಿಲ್ಲೆಯ ಒಂದಲ್ಲ ಒಂದು ಭಾಗದಲ್ಲಿ ಒಂದಲ್ಲ ಒಂದು ವನ್ಯಜೀವಿ ಮನುಷ್ಯನಿಗೆ, ಅವನ ಭೂಮಿಯಲ್ಲಿ ಇನ್ನಿಲ್ಲದ ಉಪಟಳ ಕೊಡುತ್ತಿವೆ. ಇಂತಹ ಹೊತ್ತಿನಲ್ಲಿ ಈ ಸಂಘರ್ಷವನ್ನು ತಹಬದಿಗೆ ತರಲು ಜನಸಾಮಾನ್ಯರು ಕೇಂದ್ರ ಬಜೆಟ್‌ನಲ್ಲಿ ಏನಾದರೂ ವಿಶೇಷ ಯೋಜನೆ ಘೋಷಣೆಯಾಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಜತೆಯಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ದಿನ ಕಳೆದಂತೆ ಹೆಚ್ಚುತ್ತಿರುವ ಈ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ವಿಸ್ತೃತ ಯೋಜನೆಯೊಂದನ್ನು ರೂಪಿಸಬೇಕಿದೆ.
ಶಾಶ್ವತವಾದ ಯೋಜನೆ ರೂಪಿಸುವವರೆಗೂ ತಾತ್ಕಾಲಿಕವಾಗಿ ವನ್ಯಜೀವಿಗಳ ದಾಳಿ ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕಿದೆ.
ಮುಖ್ಯವಾಗಿ, ಕಾಡಾನೆ– ಮಾನವ ಸಂಘರ್ಷ ತಡೆಗೆ ಹೆಚ್ಚು ಪರಿಣಾಮಕಾರಿಯಾದುದು ಹೇಳಲಾಗುತ್ತಿರುವ ರೈಲ್ವೆ ಹಳಿ ಬ್ಯಾರಿಕೇಡ್ ಯೋಜನೆಯನ್ನು ಕೊಡಗಿನಾದ್ಯಂತ ಅರಣ್ಯಕ್ಕೆ ಹಾಕಬೇಕು. ರೈಲ್ವೆ ಬ್ಯಾರಿಕೇಡ್‌ಗಳು ದುಬಾರಿ ಮಾತ್ರವಲ್ಲ ಅವುಗಳ ಸಾಗಾಣಿಕೆ ಮತ್ತೂ ದುಬಾರಿಯಾದ ಕಾರಣ ರಾಜ್ಯ ಸರ್ಕಾರ ಪ್ರತಿ ವರ್ಷವೂ ಕೆಲವೊಂದಿಷ್ಟು ಕಿ.ಮೀವರೆಗೆ ಹಾಕುತ್ತಿದೆ. ರೈಲ್ವೆ ಬ್ಯಾರಿಕೇಡ್‌ಗಳು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಉಚಿತವಾಗಿ ಹಾಗೂ ಉಚಿತವಾಗಿ ಕೊಡಗಿಗೆ ಈ ಬ್ಯಾರಿಕೇಡ್‌ಗಳನ್ನು ತಂದಲ್ಲಿ ರಾಜ್ಯ ಸರ್ಕಾರ ಇಲ್ಲಿ ಅಳವಡಿಸಿ ಕಾಡಾನೆ ಮಾನವ ಸಂಘರ್ಷವನ್ನು ಶಾಶ್ವತವಾಗಿ ಅಲ್ಲದಿದ್ದರೂ ತಾತ್ಕಾಲಿಕವಾಗಿ ತಡೆಯಬಹುದಾಗಿದೆ.
ರೈಲ್ವೆ ಇಲಾಖೆಯು ಕೇಂದ್ರದ ಸುಪರ್ದಿಗೆ ಬರುವುದರಿಂದ ಯಾವುದಾದರೂ ಒಂದು ಸರಕು ಸಾಗಣಿಕೆ ರೈಲನ್ನು ಇದಕ್ಕಾಗಿ ನಿಯೋಜಿಸಿ ರೈಲ್ವೆ ಬ್ಯಾರಿಕೇಡ್‌ಗಳನ್ನು ಉತ್ತರ ಭಾರತದಿಂದ ತರಲು ಅವಕಾಶವಿದೆ. ಹಬ್ಬ, ಉತ್ಸವಗಳಲ್ಲಿ ವಿಶೇಷ ಪ್ರಯಾಣಿಕ ರೈಲುಗಳನ್ನು ನಿಯೋಜಿಸುವ ಇಲಾಖೆಗೆ ಸರಕು ಸಾಗಾಣೆ ರೈಲನ್ನು ಸಂಚಾರಕ್ಕೆ ಅನುವು ಮಾಡಿಕೊಡುವುದು ಕಷ್ಟವೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.
ಇನ್ನು ಈ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸಾಧ್ಯವಾಗದ ಕಡೆ ಸೋಲಾರ್ ಬೇಲಿ, ಹ್ಯಾಂಗಿಂಗ್ ಫೆನ್ಸಿಂಗ್, ಆನೆ ಕಂದಕಗಳನ್ನು ಮಾಡಬಹುದಾಗಿದೆ. ಇವೆಲ್ಲವೂ ಸದ್ಯ ಕಾಡಾನೆಗಳಿಂದ ಉಂಟಾಗುವ ಬೆಳೆನಷ್ಟ, ಮಾನವನಷ್ಟಕ್ಕೆ ನೀಡಲಾಗುತ್ತಿರುವ ಪರಿಹಾರಕ್ಕೆ ಹೋಲಿಸಿದರೆ ದುಬಾರಿ ಎನಿಸದು. ಹಾಗಾಗಿ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಿದೆ.
ಇನ್ನು ಶಾಶ್ವತ ಪರಿಹಾರಕ್ಕೆ ದೀರ್ಘಕಾಲೀನ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ರಾಜ್ಯದ ಪಶ್ಚಿಮ ಘಟ್ಟದಲ್ಲಿರುವ ಎಲ್ಲ ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ತಾಣಗಳು, ಮೀಸಲು ಅರಣ್ಯಗಳು, ಅಭಯಾರಣ್ಯಗಳನ್ನೆಲ್ಲ ಪರಸ್ಪರ ಸಂಪರ್ಕಿಸುವಂತಹ ಪ್ರಾಣಿಗಳ ಕಾರಿಡಾರ್ ಅನ್ನು ನಿರ್ಮಿಸಬಹುದು. ಇದರಿಂದ ಪ್ರಾಣಿಗಳು ಸ್ವಚ್ಛಂದವಾಗಿ ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಹೋಗಿ ಬರುತ್ತವೆ. ಕಾರಿಡಾರ್‌ನ್ನು ರೈಲ್ವೆ ಬ್ಯಾರಿಕೇಡ್ ಹಾಕಿ ಅವು ಹೊರಬರದಂತೆ ತಡೆಯಬಹುದಾಗಿದೆ. ಈ ಕಾರಿಡಾರ್ ನಿರ್ಮಿಸಲು ಅಪಾರ ವೆಚ್ಚ, ಅಧಿಕ ಸಮಯ ಹಾಗೂ ಜನರ ಒಪ್ಪಿಗೆ ಬೇಕಿದೆ. ಇದು ಕೇವಲ ಒಂದು ಉದಾಹರಣೆಯಷ್ಟೇ ಜನರಿಗೆ ತೊಂದರೆಯಾಗದಂತಹ ಇಂತಹ ಅನೇಕ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಡುತ್ತಾರೆ.
ಇನ್ನು ಸಿಬ್ಬಂದಿ ಕೊರತೆಯಿಂದ ಅರಣ್ಯ ಇಲಾಖೆ ಏದುಸಿರು ಬಿಡುತ್ತಿದೆ. ವಿರಾಜಪೇಟೆಯಲ್ಲಿ ಶೇ 70ರಷ್ಟು ಕೊರತೆ ಇದೆ. ಇನ್ನುಳಿದ ಕಡೆಯೂ ಸಾಕಷ್ಟು ಸಿಬ್ಬಂದಿ ಕೆಲಸ ಮಾಡಲು ಇಲ್ಲ. ಇದರಿಂದಾಗಿ ವನ್ಯಜೀವಿ ದಾಳಿ ನಡೆಸಿದಾಗ ಸಾಕಾಗುವಷ್ಟು ಸಂಖ್ಯೆಯಲ್ಲಿ ಸಿಬ್ಬಂದಿ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಎಲ್ಲ ಖಾಲಿ ಹುದ್ದೆಗಳನ್ನೂ ತುಂಬಬೇಕಿದೆ.
ಆಧುನಿಕತೆ ಉಪಕರಣಗಳು, ಎಐ ಕ್ಯಾಮೆರಾಗಳು, ಆಯುಧಗಳು, ವಾಹನಗಳನ್ನು ನೀಡಬೇಕಿದೆ. ಇಂದಿಗೂ ಕಾಡಿಗೆ ಬೆಂಕಿ ಬಿದ್ದರೆ ಸೊಪ್ಪಿನಿಂದಲೇ ಆರಿಸುವ ಪರಿಸ್ಥಿತಿ ಇದೆ. ಅರಣ್ಯ ಯೋಧರ ಕೈಗೆ ಆಧುನಿಕ ಉಪಕರಣಗಳನ್ನು ನೀಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.