ಬಂಧನ (ಸಾಂದರ್ಭಿಕ ಚಿತ್ರ)
ಶನಿವಾರಸಂತೆ: ಇಲ್ಲಿಗೆ ಸಮೀಪದ ಗೌಡಳ್ಳಿ ನಿವಾಸಿಯಾದ ಅಣ್ಣಯ್ಯ (76) ಎಂಬುವವರ ಕುತ್ತಿಗೆಯಲ್ಲಿದ್ದ 27 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ ಆರೋಪದ ಮೇರೆಗೆ ಶನಿವಾರಸಂತೆಯ ಸೆಸ್ಕ್‌ನಲ್ಲಿ ಲೈನ್‌ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಸಂದೀಪ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಯು ಹಾಸನ ಜಿಲ್ಲೆಯ ಹೊಳೆನರಸೀಪುರ ಸಮೀಪದ ಉದ್ದೂರು ಗ್ರಾಮದವನಾಗಿದ್ದು, ಶನಿವಾರಸಂತೆಯ ಸೆಸ್ಕ್‌ನಲ್ಲಿ ಲೈನ್‌ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಈತ ಜೂನ್ 28ರಂದು ರಾತ್ರಿ 8.30ರ ಸಮಯದಲ್ಲಿ ಅಣ್ಣಯ್ಯ ಅವರು ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಅವರು ಧರಿಸಿದ್ದ ಮಂಕಿಕ್ಯಾಪ್‌ನ್ನು ಕಣ್ಣು ಮುಚ್ಚುವಂತೆ ಎಳೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಆತನಿಂದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಇನ್‌ಸ್ಪೆಕ್ಟರ್ ಪ್ರೀತಂ ಡಿ ಶ್ರೇಯಾಕರ್, ಸಬ್‌ಇನ್‌ಸ್ಪೆಕ್ಟರ್ ಗೋವಿಂದರಾಜು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.