
ವಿರಾಜಪೇಟೆ: ವಿದ್ಯಾ ಸಂಸ್ಥೆಗಳ ನಡುವೆ ಪರಸ್ಪರ ಬಾಂಧವ್ಯ ಮೂಡಿದಾಗ ಮಾತ್ರ ವಿದ್ಯಾರ್ಥಿಗಳು ಸೇರಿ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆವರೆಂಡ್ ಫಾದರ್ ಮದಲೈ ಮುತ್ತು ಅಭಿಪ್ರಾಯಪಟ್ಟರು.
ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಮಂಗಳವಾರ ಎಕೋಸ್ ಆಫ್ ದಿ ಅರ್ಥ್ ದ್ಯೇಯದಡಿಯಲ್ಲಿ ಆಯೋಜಿಸಿದ್ದ ‘ಆನ್ಸ್ ಫೆಸ್ಟ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತವಾಗಿದ್ದು ವಿದ್ಯಾಸಂಸ್ಥೆಯು ಮೌಲ್ಯಧಾರಿತ ಶಿಕ್ಷಣಕ್ಕೆ ಮನ್ನಣೆ ನೀಡುತ್ತಿದೆ. ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ ಎಂದರು.
ಸಮಾರೋಪ ಸಮಾರಂಭದಲ್ಲಿ ಬಹುಮಾತ ವಿತರಿಸಿ ಮಾತನಾಡಿದ ಕಲಾವಿದೆ ಬಿ. ಲಿಖಿತಾ, ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡಿಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿದರು.
ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೊಮಿನಿಕ್, ಸಹಾಯಕ ಧರ್ಮಗುರು ಅಭಿಲಾಶ್, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮಾ ಬಿ.ಡಿ, ಉಪನ್ಯಾಸಕರಾದ ಅರ್ಜುನ್, ವಿದ್ಯಾರ್ಥಿ ಸಂಘದ ನಾಯಕ ಕೃಷ್ಣ ಶಾಸ್ತ್ರಿ, ಕಾಲೇಜಿನ ಉಪನ್ಯಾಸಕರು, ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸಿಐಟಿಗೆ ಸಮಗ್ರ ಪ್ರಶಸ್ತಿ: ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜು ರನ್ನರ್ಸ್ ಟ್ರೋಫಿ ಪಡೆದವು.
ವಿಜೇತ ತಂಡವು ₹15 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡವು ₹11 ಸಾವಿರ ನಗದು ಹಾಗೂ ಟ್ರೋಫಿ ಪಡೆದವು.
ಪೆನ್ಸಿಲ್ ಸ್ಕೆಚ್, ರ‍್ಯಾಂಪ್ ವಾಕ್ ಹಾಗೂ ಕಸದಿಂದ ರಸ ಸ್ಪರ್ಧೆಯಲ್ಲಿ ಕೂರ್ಗ್ ಇನ್ಸ್ಟಿಟ್ಯೂಟ್ ಕಾಲೇಜು ಪೊನ್ನಂಪೇಟೆ, ಟ್ರಸರ್ ಹಂಟ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಿದ್ದಾಪುರದ ಸೆಂಟ್ ಆನ್ಸ್ ಪಿ.ಯು ಕಾಲೇಜು, ಸ್ಪೆಲ್ ಬಿ ಹಾಗೂ ಕ್ವಿಜ್‌ನಲ್ಲಿ ಗೋಣಿಕೊಪ್ಪಲು ಕಾಲ್ಸ್ ಕಾಲೇಜು, ಫೇಸ್ ಪೈಂಟಿಂಗ್‌ನಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಗೇಮಿಂಗ್‌ನಲ್ಲಿ ಮಡಿಕೇರಿ ಸಂತ ಮೈಕಲರ ಕಾಲೇಜು ಹಾಗೂ ರೀಲ್ ಮೇಕಿಂಗ್‌ನಲ್ಲಿ ವಿವೇಕಾನಂದ ಪಿ.ಯು ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.