
ಮಡಿಕೇರಿ: ‘ವಿಶ್ವದಲ್ಲೆ ಅತಿ ಸುಂದರವಾದ ತಾಣವಾದ ಕೊಡಗಿನಲ್ಲಿರುವ ಅಗಾಧ ಜೀವ ವೈವಿಧ್ಯವನ್ನು ಉಳಿಸಿಕೊಳ್ಳಬೇಕು’ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಸಂಗಪ್ಪ ಆಲೂರ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ 24ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ‘ಜಿಲ್ಲೆಯ ಕೆಲವೆಡೆಯ ಜೀವವೈವಿಧ್ಯವನ್ನು ಕುರಿತ ಅಧ್ಯಯನಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ. ಈ ಸಂಪತ್ತನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದು’ ಎಂದರು.
‘ಪತ್ರಿಕೋದ್ಯಮ ಜವಾಬ್ದಾರಿಯುತವಾಗಿರಬೇಕು. ಗ್ರಾಮೀಣ ಭಾಗದ ಜನರ ಧ್ವನಿಯಾಗಬೇಕು’ ಎಂದ ಅವರು, ಈಚೆಗೆ ನಡೆದ ‘ಸ್ವಚ್ಛ ಕೊಡಗು ಸುಂದರ ಕೊಡಗು’ ಅಭಿಯಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಪತ್ರಿಕಾ ಭವನದ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ‘2024-25ನೇ ಸಾಲಿನಲ್ಲಿ ₹ 2.30 ಲಕ್ಷ ವಿದ್ಯಾನಿಧಿಯನ್ನು ಮಕ್ಕಳಿಗೆ ನೀಡಲಾಗಿದೆ. ಅನಾರೋಗ್ಯಕ್ಕೆ ಒಳಗಾದವರು, ಆರ್ಥಿಕ ಸಮಸ್ಯೆಯುಳ್ಳವರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ’ ಎಂದರು.
ಟೇಬಲ್ ಟೆನಿಸ್, ಕೇರಂ, ಚೆಸ್ ಟೂರ್ನಿಯ ವಿಜೇತ ಪತ್ರಕರ್ತರಿಗೆ ಬಹುಮಾನ ವಿತರಿಸಲಾಯಿತು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಕೊಡಗು ಪತ್ರಿಕಾ ಭವನದ ಟ್ರಸ್ಟಿ ಮಧೋಶ್ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಕೋಶಾಧಿಕಾರಿ ಕೆ.ತಿಮ್ಮಪ್ಪ, ಟ್ರಸ್ಟಿ ವಿ.ಪಿ.ಸುರೇಶ್, ಜೀವನ್ ಚಿಣ್ಣಪ್ಪ, ರಜತ್ ರಾಜ್, ಐತಿಚಂಡ ರಮೇಶ್ ಉತ್ತಪ್ಪ ಭಾಗವಹಿಸಿದ್ದರು.
ಪತ್ರಿಕೋದ್ಯಮ ವಿಭಾಗ ಆರಂಭ
‘ಕೊಡಗು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಿಂದ ಸಮೂಹ ಸಂಹವನ ಮತ್ತು ಪತ್ರಿಕೋದ್ಯಮ ವಿಭಾಗವನ್ನು ಆರಂಭಿಸಿದ್ದು ಈಗಾಗಲೇ ಕೆಲವರು ಪ್ರವೇಶ ಪಡೆದಿದ್ದಾರೆ’ ಎಂದು ಕುಲಪತಿ ಅಶೋಕ್ ಸಂಗಪ್ಪ ಆಲೂರ ತಿಳಿಸಿದರು. ‘ವಿದ್ಯಾರ್ಥಿಗಳು ಮತ್ತು ಪತ್ರಕರ್ತರಿಗಾಗಿ ಸದ್ಯದಲ್ಲೆ ವಿಜ್ಞಾನದ ಬರವಣಿಗೆ ಕುರಿತು ಕಾರ್ಯಾಗಾರವನ್ನು ನಡೆಸಲಾಗುವುದು’ ಎಂದರು.
‘ಪ್ರಜಾವಾಣಿ’ ವರದಿಗಳಿಗೆ ಶ್ಲಾಘನೆ
ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್ ಮಾತನಾಡಿ ಪ್ರಜಾವಾಣಿ ಪತ್ರಿಕೆಯ ವರದಿಗಾರಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ‘ಕೊಡಗಿನಲ್ಲಿ ದಸರೆಯ ವೇಳೆ ವಿಭಿನ್ನ ದೃಷ್ಟಿಯಿಂದ ಪ್ರಜಾವಾಣಿ ವಿಶೇಷ ವರದಿಗಳನ್ನು ಪ್ರಕಟಿಸಿತು’ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.