
ಮಡಿಕೇರಿ: ದೇಶದ ಗಮನ ಸೆಳೆದಿರುವ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು 2026ರ ಏಪ್ರಿಲ್ 5ರಿಂದ ಮೇ 2ರವರೆಗೆ ಚೇನಂಡ ಕುಟುಂಬಸ್ಥರು ಆಯೋಜಿಸುತ್ತಿದ್ದು, ಇದಕ್ಕಾಗಿ ಭರದ ಸಿದ್ಧತೆಗಳು ಆರಂಭವಾಗಿವೆ. ಇದರ ಅಂಗವಾಗಿ ಚೇನಂಡ ಹಾಕಿ ಉತ್ಸವದ ಲಾಂಛನವನ್ನು ನ. 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಲಿದ್ದಾರೆ.
‘ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಟೂರ್ನಿಯ ಲಾಂಛನ ಬಿಡುಗಡೆ ಮಾಡಲಿದ್ದು, ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರು ಭಾಗವಹಿಸಲಿದ್ದಾರೆ’ ಎಂದು ಚೇನಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಸಿ.ಪಿ.ಕರುಂಬಯ್ಯ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂಡ್ಯೋಳಂಡ ಕುಟುಂಬ 2024ರಲ್ಲಿ ಆಯೋಜಿಸಿದ್ದ ಹಾಕಿ ಉತ್ಸವವು ವಿಶ್ವದ ಅತಿ ದೊಡ್ಡ ಹಾಕಿ ಪಂದ್ಯಾವಳಿ ಎಂಬ ಗಿನ್ನಿಸ್ ದಾಖಲೆಗೆ ಹಾಗೂ 2025ರಲ್ಲಿ ಮುದ್ದಂಡ ಕುಟುಂಬವು ಆಯೋಜಿಸಿದ್ದ ಹಾಕಿ ಪಂದ್ಯಾವಳಿಯು ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ದಾಖಲೆಗೆ ಸೇರ್ಪಡೆಯಾಗಿವೆ. ನಮ್ಮ ಹಾಕಿ ಉತ್ಸವವೂ ಸಹ ವಿಶ್ವ ದಾಖಲೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.
ಸಮಿತಿಯ ಕಾರ್ಯಾಧ್ಯಕ್ಷ ಸಿ.ಟಿ.ಚೆಂಗಪ್ಪ ಮಾತನಾಡಿ, ‘ಈ ಬಾರಿ ಹಾಕಿ ಪಂದ್ಯಾವಳಿಯಲ್ಲಿ ಸುಮಾರು 450ಕ್ಕೂ ಹೆಚ್ಚಿನ ತಂಡಗಳು ಭಾಗಿಯಾಗುವ ನಿರೀಕ್ಷೆ ಇದೆ. ಮಹಿಳಾ ವಿಭಾಗದಲ್ಲೂ 120ಕ್ಕೂ ಅಧಿಕ ತಂಡಗಳು ಭಾಗಿಯಾಗುವ ಸಂಭವ ಇದೆ. ಈ ನಿಟ್ಟಿನಲ್ಲಿ ಇದು ಸಹ ಬೃಹತ್ ಪಂದ್ಯಾವಳಿ ಎನಿಸಲಿದೆ’ ಎಂದರು.
ಕಾರ್ಯದರ್ಶಿ ಸಿ.ಎಸ್.ಮಾದಯ್ಯ ಮಾತನಾಡಿ, ‘ಉತ್ಸವದಲ್ಲಿ ಕೇವಲ ಕ್ರೀಡೆಗಳಷ್ಟೇ ಇರದೇ ಅದರೊಂದಿಗೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅವುಗಳಲ್ಲಿ ಕಾಫಿ ಕೃಷಿ ಹಾಗೂ ಜೇನು ಕೃಷಿಗೆ ಸಂಬಂಧಿಸಿದ ವಿಶೇಷ ಉಪನ್ಯಾಸ, ಕಾರ್ಯಾಗಾರಗಳನ್ನು ನಡೆಸಲಾಗುವುದು’ ಎಂದರು.
ಪ್ರತಿ ಗೋಲಿಗೂ ಸಸಿ ನೆಡುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಮಾತ್ರವಲ್ಲ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ಹಾಕಿ ಪಂದ್ಯಾವಳಿಯೊಂದಿಗೆ ನಡೆಯಲಿವೆ ಎಂದು ಮಾಹಿತಿ ನೀಡಿದರು. ಸಮಿತಿಯ ನಿರ್ದೇಶಕಿ ನಮೃತಾ ಅಯ್ಯಣ್ಣ ಭಾಗವಹಿಸಿದ್ದರು.
ಪ್ರಾಥಮಿಕ ಶಾಲೆಯಿಂದಲೇ ಹಾಕಿ ಆಟ
ಚೇನಂಡ ಹಾಕಿ ಉತ್ಸವದ ಪ್ರಯುಕ್ತ 2026ರ ಜನವರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ‘ಪ್ರಾಥಮಿಕ ಶಾಲೆಯಿಂದಲೇ ಹಾಕಿ ಆಟ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಕಿ ಉತ್ಸವ ಸಮಿತಿಯ ಲೆಕ್ಕಾಧಿಕಾರಿ ಶ್ಯಾಮಲಾ ಚೆಂಗಪ್ಪ ತಿಳಿಸಿದರು. ಇದರಲ್ಲಿ ಕೊಡಗು ಜಿಲ್ಲಾಮಟ್ಟದ ಬಾಲಕ ಬಾಲಕಿಯರ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ. ಈ ಟೂರ್ನಿಯಲ್ಲಿ ಎಲ್ಲ ಜಾತಿ ಧರ್ಮ ವರ್ಗದ ಮಕ್ಕಳು ಮುಕ್ತವಾಗಿ ಪಾಲ್ಗೊಳ್ಳಬಹುದು. ಶಾಲೆಯಲ್ಲಿ ಹಾಕಿ ತಂಡ ಇಲ್ಲದಿದ್ದರೂ ಆಡಲು ಆಸಕ್ತಿ ಇರುವ ಮಕ್ಕಳಿಗೆ ಅವಕಾಶ ಮಾಡಿಕೊಡಲಾಗುವುದು. ಇಲ್ಲಿ ಆಯ್ಕೆಯಾದ ಮಕ್ಕಳಿಗೆ ನಾಪೋಕ್ಲುವಿನಲ್ಲಿ ಮಾರ್ಚ್ ಏಪ್ರಿಲ್ ಮೇ ತಿಂಗಳಿನಲ್ಲಿ ಉನ್ನತ ಮಟ್ಟದ ಹಾಕಿ ತರಬೇತಿ ನೀಡಲಾಗುವುದು ಮಾತ್ರವಲ್ಲ ಹಾಕಿ ಕ್ರೀಡಾ ಪರಿಕರಗಳನ್ನೂ ವಿತರಿಸಲಾಗುವುದು ಎಂದು ಹೇಳಿದರು.
ಹಾಕಿ ಉತ್ಸವದ ವೇಳೆ ಬೇರೆ ಕ್ರೀಡಾಕೂಟ ಬೇಡ; ಮನವಿ
ಚೇನಂಡ ಹಾಕಿ ಉತ್ಸವದ ಕಾರ್ಯಾಧ್ಯಕ್ಷ ಸಿ.ಟಿ.ಚೆಂಗಪ್ಪ ಮಾತನಾಡಿ ‘ಚೇನಂಡ ಹಾಕಿ ಪಂದ್ಯಾವಳಿಯು 2026ರ ಏಪ್ರಿಲ್ 5ರಿಂದ ಮೇ 2ರವರೆಗೆ ನಾಪೋಕ್ಲುವಿನಲ್ಲಿ ನಡೆಯಲಿದೆ. ಈ ವೇಳೆ ಮೈದಾನದ ಲಭ್ಯತೆ ಕ್ರೀಡಾಪಟುಗಳ ಭಾಗವಹಿಸುವಿಕೆ ಪ್ರೇಕ್ಷಕರು ಮತ್ತು ಪ್ರವಾಸಿಗರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ಕೊಡಗು ಜಿಲ್ಲೆಯಲ್ಲಿ ಇನ್ನಿತರ ಕ್ರೀಡಾಕೂಟಗಳನ್ನು ನಡೆಸದೇ ಮುಂದೂಡಬೇಕು. ಇಲ್ಲವೇ ಮುಂಚಿತವಾಗಿಯೇ ನಡೆಸಬೇಕು ಎಂದು ಜಿಲ್ಲೆಯ ಸಮಸ್ತ ಜನತೆಯಲ್ಲಿ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇವೆ’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.