ADVERTISEMENT

ಸೋಮವಾಪೇಟೆ: ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ ಸಂಪನ್ನ

​ಪ್ರಜಾವಾಣಿ ವಾರ್ತೆ
Published 5 ಮೇ 2025, 12:37 IST
Last Updated 5 ಮೇ 2025, 12:37 IST
ಸೋಮವಾರಪೇಟೆ ಪಟ್ಟಣದ ಪ್ರಮುಖ ಬೀದಿಯಲ್ಲಿ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ದ ಶಿಬಿರಾರ್ಥಿಗಳು ಗ್ರಾಮೀಣ ಆಟಿಕೆಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಸುಮನ, ಗೌತಮ್ ಪಾಲ್ಗೊಂಡಿದ್ದರು
ಸೋಮವಾರಪೇಟೆ ಪಟ್ಟಣದ ಪ್ರಮುಖ ಬೀದಿಯಲ್ಲಿ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’ದ ಶಿಬಿರಾರ್ಥಿಗಳು ಗ್ರಾಮೀಣ ಆಟಿಕೆಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದರು. ಸುಮನ, ಗೌತಮ್ ಪಾಲ್ಗೊಂಡಿದ್ದರು   

ಸೋಮವಾಪೇಟೆ: ನಾವು ಪ್ರತಿಷ್ಠಾನದಿಂದ ಮಹಿಳಾ ಸಮಾಜದಲ್ಲಿ ಕಳೆದ 20 ದಿನಗಳಿಂದ ನಡೆದ ‘ಮಕ್ಕಳ ಬಾಲ್ಯ ಕಟ್ಟುವ ಹಬ್ಬ’– ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಸೋಮವಾರ ನಡೆಯಿತು.

ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನ ಮ್ಯಾಥ್ಯು ಮಾತನಾಡಿ, ‘ಶಿಬಿರದಲ್ಲಿ ಪ್ರತಿಭಾವಂತ ಸಂಪನ್ಮೂಲ ವ್ಯಕ್ತಿಗಳು ಗುರಿ, ಸಾಧನೆ, ಕಲಿಕೆ, ಮೂಢನಂಬಿಕೆ, ವಿಜ್ಞಾನದ ಮಹತ್ವ, ಆರೋಗ್ಯ, ಸಾಮಾಜಿಕ ಕರ್ತವ್ಯಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದ್ದಾರೆ’ ಎಂದರು.

‘ಮನೆಯಲ್ಲಿ ಪೋಷಕರು ಮಕ್ಕಳಿಗೆ ನಿರ್ದಿಷ್ಟ ವಿಷಯದ ಬಗ್ಗೆ ಒತ್ತಡ ಹೇರಬಾರದು. ಮನೆಯಲ್ಲಿ ಮಕ್ಕಳು ಸ್ವತಂತ್ರವಾಗಿ ಇರಬೇಕು. ಅವರಿಗೆ ಮನೆ ಎಂಬುದು ತುಂಬಾ ಇಷ್ಟವಾದ ಸ್ಥಳವಾಗಿರುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನು ಮಾಡಲು ಬಿಡಬೇಕು. ನಿರ್ಬಂದ ಹೇರಬಾರದು. ಮನೆಯೇ ಮೊದಲ ಪಾಠಶಾಲೆ. ತಂದೆ ತಾಯಿ ಮೊದಲು ಗುರು ಎಂಬುದನ್ನು ಯಾರು ಮರೆಯಬಾರದು’ ಎಂದು ಹೇಳಿದರು.

ADVERTISEMENT

ಶಿಬಿರಾರ್ಥಿಗಳು ತಾವು ಕಲಿತ ಗ್ರಾಮೀಣ ಆಟಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ತಾವೇ ರಚಿಸಿದ ಚಿಕ್ಕಪುಟ್ಟ ಕವನಗಳನ್ನು ವಾಚಿಸಿ ಸಂಭ್ರಮಿಸಿದರು. ಮಕ್ಕಳು ಬಿಡಿಸಿದ ಕಾಲ್ಪನಿಕ ಚಿತ್ರಗಳನ್ನು ಪ್ರೇಮ್ ಅಳವಡಿಸಿ ಪೋಷಕರಿಗೆ ನೀಡಲಾಯಿತು. ಶಿಬಿರದಲ್ಲಿ ಮಕ್ಕಳು ತಮ್ಮ ಕನಸುಗಳು ಹಾಗೂ ಗುರಿಯ ಬಗ್ಗೆ ಬರೆದ ಪತ್ರಗಳನ್ನು ಪೋಷಕರಿಗೆ ನೀಡಲಾಯಿತು.

ಗ್ರಾಮೀಣ ಆಟಗಳನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾವನ್ನು ಪಟ್ಟಣದ ಕೆಲ ರಸ್ತೆಗಳಲ್ಲಿ ನಡೆಸಿದರು. ಮಕ್ಕಳು ರಸ್ತೆಯಲ್ಲೆ ಬೇರಿಂಗ್ ಗಾಡಿಯನ್ನು ಚಲಾಯಿಸಿದರು. ಸೈಕಲ್ ಟೈರನ್ನು ಕೋಲಿನಿಂದ ಓಡಿಸಿದರು. ವಿವಿಧ ಗ್ರಾಮೀಣ ಆಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ವೇದಿಕೆಯಲ್ಲಿ ಮಕ್ಕಳು ಕಿರು ನಾಟಕಗಳನ್ನು ಪ್ರದರ್ಶಿಸಿದರು. ನೃತ್ಯ ಮಾಡಿ, ಹಾಡು ಹಾಡಿ ಪೋಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ನಾವು ಪ್ರತಿಷ್ಠಾನದಲ್ಲಿ ಕೆಲಸ ಮಾಡುತ್ತಿರುವ ಮಕ್ಕಳ ಹಕ್ಕುಗಳ ಪ್ರತಿನಿಧಿಗಳಾದ ಪಿ.ಬಿ.ಪೊನ್ನಪ್ಪ, ಎಂ.ಜೆ.ಪ್ರಜ್ವಲ್, ರವಿಚಂದ್ರ, ಬಿ.ಕೆ.ಕುಮಾರಿ, ಶಶಿಕುಮಾರ್ ಅವರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಖುಷಿ, ಬಿಜ್ಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.