ADVERTISEMENT

ಸುಂಟಿಕೊಪ್ಪದಲ್ಲಿ ಕ್ರಿಸ್ಮಸ್ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 2:18 IST
Last Updated 26 ಡಿಸೆಂಬರ್ 2024, 2:18 IST
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಗೋದಲಿಯ ಒಂದು ನೋಟ
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಗೋದಲಿಯ ಒಂದು ನೋಟ   

ಸುಂಟಿಕೊಪ್ಪ: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಏಸು ಕ್ರಿಸ್ತ‌ನ ಜನ್ಮದಿನದ ಅಂಗವಾಗಿ ಪ್ರಾರ್ಥನೆ ಹಾಗೂ ದಿವ್ಯಬಲಿಪೂಜೆಯೊಂದಿಗೆ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಹಬ್ಬವನ್ನು ಆಚರಿಸಿಕೊಂಡರು.

ಮಂಗಳವಾರ ರಾತ್ರಿ 11 ಗಂಟೆಯಿಂದ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಅವರ ನೇತೃತ್ವದಲ್ಲಿ ಪ್ರಾರ್ಥನೆ, ಸಾಮೂಹಿಕ ಗಾಯನ ನಡೆದವು. ಸಮಿತಿಯ ಯುವಕರು ನಿರ್ಮಿಸಿದ ಗೋದಲಿಯಲ್ಲಿ ಬಾಲ ಏಸುವನ್ನು ಮಧ್ಯ ರಾತ್ರಿ ಮಲಗಿಸಿದಾಗ ಸಾಮೂಹಿಕ‌ ಗಾಯನ ಮೊಳಗಿದವು. ದಿವ್ಯ ಬಲಿ ಪೂಜೆಯೊಂದಿಗೆ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಫಾದರ್ ವಿಜಯಕುಮಾರ್ ಅವರು ಆಶೀರ್ವಚನ ನೀಡಿ ಪ್ರಾರ್ಥನೆ ಸಲ್ಲಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೈಸ್ತರು ಏಸುಕ್ರಿಸ್ತನ ಜನ್ಮದಿನದ ಶುಭಾಶಯ ವಿನಿಮಯ ಮಾಡಿಕೊಂಡು ಸಂತೋಷಪಟ್ಟರು.

ADVERTISEMENT

ಬುಧವಾರ ಬೆಳಿಗ್ಗೆ ಗಾಯ‌ನ, ಪ್ರಾರ್ಥನೆ ನಡೆದವು. ಕ್ರೈಸ್ತರು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು.
ದೇವಾಲಯದಲ್ಲಿ ಧರ್ಮಗುರುಗಳು, ಕ್ಲಾರ ಕನ್ಯಾಸ್ರ್ರೀ ಮಠದ ಮದರ್ ಸೂಪಿರಿಯರ್ ಜುವಿಟಾ ವಾಸ್ ಇದ್ದರು.

ಮನೆಗೆ ತೆರಳಿದ ನೆಂಟರು, ಗೆಳೆಯರೊಂದಿಗೆ ವಿಶೇಷ ಬಗೆಯ ತಿಂಡಿ– ತಿನಿಸು, ಕೇಕ್, ಭೋಜನ ಸವಿದರು. ಪಟಾಕಿ ಸಿಡಿಸಿ ಕ್ರಿಸ್ಮಸ್ ಅನ್ನು ಆಚರಿಸಿಕೊಂಡರು.

ಕ್ಯಾರೋಲ್ ಗಾಯನ ತಂಡ ಹಾಗೂ ಸಂತ ಕ್ಲಾಸ್ ವೇಷಧಾರಿಗಳು 23 ದಿನಗಳಿಂದ ಕ್ರೈಸ್ತರ ಮನೆಗಳಿಗೆ ತೆರಳಿ ಶುಭ ಹಾರೈಸಿ ಹಬ್ಬಕ್ಕೆ ಅಣಿಯಾಗುವಂತೆ ಕರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.