ADVERTISEMENT

ಗೋಮಾಳ ಜಾಗ ಅತಿಕ್ರಮಣ ತೆರವುಗೊಳಿಸಿ

ಮಾದಪಟ್ಟಣದ ಜಾಗ: ಗುಡ್ಡೆಹೊಸೂರು ಕೆಡಿಪಿ ಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:20 IST
Last Updated 25 ನವೆಂಬರ್ 2025, 3:20 IST
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಮಟ್ಟದ ಕೆಡಿಪಿ ಸಭೆ ಸೌಮ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಮಟ್ಟದ ಕೆಡಿಪಿ ಸಭೆ ಸೌಮ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.   

ಕುಶಾಲನಗರ: ಮಾದಪಟ್ಟಣದ ಗೋಮಾಳ ಜಾಗ ಅತಿಕ್ರಮಣ ತೆರವುಗೊಳಿಸಬೇಕು ಎಂದು ಇಲ್ಲಿನ ಗ್ರಾಮ ಪಂಚಾಯತಿ ಮಟ್ಟದ ಕೆಡಿಪಿ ಸಭೆಯಲ್ಲಿ ಸದಸ್ಯರು ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಸಂತೋಷ್ ಅವರನ್ನು ಆಗ್ರಹಿಸಿದರು. 

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಸೌಮ್ಯ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತಿ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ನೀಡಿದರು.

ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಹೇಂದ್ರ ಮಾತನಾಡಿ, ‘ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುತ್ತಿದ್ದು, ಒಂದು ಮೊಟ್ಟೆಗೆ ₹5.30ಕ್ಕೆ ನಿಗದಿಪಡಿಸಲಾಗಿದೆ. ಆದರೆ ಮಾರುಕಟ್ಟೆ ದರ ಜಾಸ್ತಿ ಇರುವುದರಿಂದ ಯೋಜನೆಯ ಅನುಷ್ಠಾನದಲ್ಲಿ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಗ್ರಾಮ ಪಂಚಾಯಿತಿಯಿಂದ ಈಗಾಗಲೇ ನಮ್ಮ ಶಾಲೆಗೆ ಸುಸಜ್ಜಿತ ಶೌಚಾಲಯ, ಆವರಣ ತಡೆಗೋಡೆ ಹಾಗೂ ಸಭಾಭವನಕ್ಕೆ ಇಂಟರ್‌ಲಾಕ್ ಅಳವಡಿಸಿಕೊಟ್ಟಿದ್ದಾರೆ. ಜೊತೆಗೆ ಸರ್ಕಾರದಿಂದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ನೀರಾವರಿ ನಿಗಮದ ಕಿರಿಯ ಎಂಜಿನಿಯರ್ ಕಿರಣ್ ಮಾತನಾಡಿ, ‘ಪಂಚಾಯತಿ ವ್ಯಾಪ್ತಿಯ ನಾಲೆಗಳ ಸ್ವಚ್ಛತಾ ಕಾರ್ಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಬಸವನಹಳ್ಳಿ ಹಾಗೂ ಮಾದಪಟ್ಟಣ ಗ್ರಾಮಗಳಲ್ಲಿ ಹಾದು ನಾಲೆಗಳಿಂದ ಗ್ರಾಮದ ಜನರಿಗೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ ನಾಲೆಗಳನ್ನು ಮುಚ್ಚಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

‘ಹಾಲು ಉತ್ಪಾದಕರಿಗೆ 6 ‌ತಿಂಗಳಿನಿಂದ ಪ್ರೋತ್ಸಾಹ ಧನ ಬಿಡುಗಡೆ ಆಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಒತ್ತಾಯಿಸಿದರು.

‘ಕಾಲುಬಾಯಿ ಜ್ವರಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ನೀಡಲಾಗುತ್ತಿದ್ದು,ನಾಯಿ ಮತ್ತು ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಸಲಹೆ ನೀಡಿದರು.

ಬಸವನಹಳ್ಳಿ ಸರ್ವೆ ನಂಬರ್ 1/1 ಸರ್ಕಾರಿ ಬಡಾವಣೆ ಹಾಗೂ ಬಸವನಹಳ್ಳಿ ಮೊರಾರ್ಜಿ ಶಾಲೆ ಹಾಗೂ ಗುಡ್ಡೆಹೊಸೂರು ಪ್ರಾಥಮಿಕ ಶಾಲಾ ಆವರಣಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಕ್ರಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ ಅಧಿಕಾರಿಗಳಿಗೆ ಸೂಚಿಸಿದರು.

‘ಪಂಚಾಯಿತಿಯಿಂದ ಸಂಜೀವಿನಿ ಸಂತೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ಮಾಹಿತಿ ನೀಡಲ ಬಯಸಿದರೆ ಸದರಿ ಸಂಜೀವಿನಿ ಸಂತೆಯಲ್ಲಿ ಪ್ರತ್ಯೇಕ ಮಳಿಗೆಗಳನ್ನು ನೀಡಲಾಗುವುದು’ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಮೇಶ ತಿಳಿಸಿದರು.

ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರವೀಣ್ ,ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕುಮಾರಸ್ವಾಮಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.