
ಶನಿವಾರಸಂತೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರ ಇದರ ವತಿಯಿಂದ ಬುಧವಾರ ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಕ್ಲಸ್ಟರ್ ಹಂತದ ‘ಎಫ್‍ಎಲ್‍ಎನ್ ಕಲಿಕಾ ಹಬ್ಬ’ ಬುಧವಾರ ನಡೆಯಿತು.
‘ಕಲಿಕಾ ಹಬ್ಬ’ ಕಾರ್ಯಕ್ರಮದ ಕುರಿತು ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶಿಕ್ಷಣ ಇಲಾಖೆಯು ಕಲಿಕೆಯಲ್ಲಿ ಹಿಂದುಳಿದ ಅಂದರೆ ಎಫ್‍ಎಲ್‍ಎನ್ ಮಟ್ಟವನ್ನು ಸಾಧಿಸದ ಮಕ್ಕಳನ್ನು ಪೂರಕ ಕಲಿಕೆಗೆ ಸಿದ್ದತೆಗೊಳಿಸುವ ಸಲುವಾಗಿ ಕ್ಲಸ್ಟರ್ ಹಂತದ ಎಫ್‍ಎಲ್‍ಎನ್ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಈ ಮೂಲಕ ಶಾಲಾ ಮಕ್ಕಳಿಗೆ ಪಠ್ಯ, ಪಠ್ಯೇತರ ಚಟುವಟಿಕೆ ಮಾಡಿಸುವ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸಲಾಗುತ್ತಿದೆ’ ಎಂದರು.
ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ವಿಜ್ಞಾನ, ಗಣಿತ, ಇಂಗ್ಲಿಷ್ ಮೊದಲಾದ ವಿಷಯಗಳಲ್ಲಿ ಹಿಂದುಳಿದ ಮಕ್ಕಳಿಗೆ ಮುಕ್ತವಾಗಿ ಕಲಿಸಿಕೊಡಲಾಗುತ್ತಿದೆ. ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ರಸಪ್ರಶ್ನೆ, ಭಾಷಣ ಮುಂತಾದ ಸ್ಪರ್ಧಾ ಚಟುವಟಿಕೆಯ ಜೊತೆಯಲ್ಲಿ ಕೌಶಲ್ಯಗಳಿಗೆ ಸಂಬಂಧಿಸಿದ ಚಟುವಟಿಕೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಮಕ್ಕಳಿಗಾಗಿ ರೂಪಿಸಿರುವ ಈ ಕಾರ್ಯಕ್ರಮದಲ್ಲಿ ಒಟ್ಟು 11 ಚಟುವಟಿಕೆಗಳಿದ್ದು 1ರಿಂದ 5 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಸ್.ಎಂ.ಸುರೇಶ್ ಉದ್ಘಾಟನೆ ಮಾಡುವ ಮೂಲಕ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಚರಣ್, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕವಿತಾ, ಸಹ ಶಿಕ್ಷಕಿಯರಾದ ಜೆಸಿಂತಾ, ಮಮತ, ವಿಶಾಲಾಕ್ಷಿ, ರಜಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.