ಸುಂಟಿಕೊಪ್ಪ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ‘ಕೊಡವಲ್ಯಾಂಡ್’ ಹಕ್ಕೊತ್ತಾಯಕ್ಕಾಗಿ ಮಾನವ ಸರಪಳಿ ನಿರ್ಮಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ಸಿಎನ್‌ಸಿ ಸಂಚಾಲಕ ಎನ್.ಯು.ನಾಚಪ್ಪ ಅವರು, ಕೊಡವರು ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರಾಟ ಮಾಡಬಾರದು. ಕೊಡಗಿನ ಭೂಮಿಗಳು ನಮ್ಮ ಪೂರ್ವಿಕರ ಮಾಡಿದ ಪುಣ್ಯದ ಫಲವಾಗಿದ್ದು, ಕೃಷಿ ಚಟುವಟಿಕೆಯನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಕೊಡವರು ಉಳಿಸಲು ಪಣ ತೊಡಬೇಕು. ಭೂಮಾಫಿಯಾದಿಂದ ಕೊಡವರ ಭೂಮಿ ಪರಭಾರೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕು. ಕೊಡಗಿನ ಅರಣ್ಯ ನಾಶಕ್ಕೆ ಮೂಲನಿವಾಸಿಗಳು ಕಾರಣರಲ್ಲ. ಬದಲಿಗೆ ಜಾಗತೀಕರಣದ ಹೆಸರಿನಲ್ಲಿ ದೊಡ್ಡ ಕೈಗಾರಿಕೋದ್ಯಮಿಗಳು ಕೊಡಗಿನ ಬೃಹತ್ ಕಾಫಿ ತೋಟವನ್ನು ಖರೀದಿಸಿ ರೇಸಾರ್ಟ್ ಹೋಂಸ್ಟೇಗಳನ್ನು ನಿರ್ಮಿಸಿ ಕಾಂಕ್ರೀಟಿಕರಣ ಗೊಳಿಸುತಿರುವುದರಿಂದ ಕೊಡಗಿನಲ್ಲಿ ಭೂಕುಸಿತವಾಗಲು ಕಾರಣವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.
ದೇಶದ ಭದ್ರತೆಯಲ್ಲಿ ನಮ್ಮ ಜನಾಂಗದವರೇ ಅತೀ ಹೆಚ್ಚಾಗಿ ಸೇನೆಯ ಸೇವೆಯಲ್ಲಿದ್ದರೂ ನಮ್ಮ ಜನಾಂಗವನ್ನು ಕಡೆಗಣಿಸಲಾಗಿದೆ. ಅಲ್ಲದೆ ಜನ ಸಂಖ್ಯೆ ಆಧಾರದಲ್ಲಿ ಕೊಡವರನ್ನು ಸರ್ಕಾರಗಳು ನೋಡುತ್ತಿರುವ ಹಿನ್ನಲೆಯಲ್ಲಿ ಇರುವ ಶಾಸಕರ ಸಂಖ್ಯಾಬಲವನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಗೆ ದೊರೆಯಬೇಕಾದ ಮಾನ್ಯತೆಗೂ ಕುತ್ತು ಬಂದಿದೆ. ಕೊಡಗಿಗೆ ಪ್ರತ್ಯೇಕ ಸಂಸತ್ ಬೇಕಾಗಿಲ್ಲ. ಆದರೆ ಕೊಡವರಿಗಾಗಿ ಸಂಸತ್ ನಿರ್ಮಾಣವಾಗಬೇಕು. ಜಾತಿ ಗಣತಿ ಸಂದರ್ಭದಲ್ಲಿ ಕೊಡವ ಜನಾಂಗದವರು ಕೊಡವರೆಂದು ಹೆಸರು ಸೇರ್ಪಡೆ ಗೊಳಿಸುವ ಮೂಲಕ ಜನಸಂಖ್ಯೆಯ ಬಲವನ್ನು ಹೆಚ್ಚಿಸಬೇಕು. ಕೊಡವ ಜನಾಂಗದವರನ್ನು ಬುಡಕಟ್ಟು ಮೀಸಲಾತಿಗೆ ಸೇರ್ಪಡೆಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ದಾವೆ ದಾಖಲಿಸಲಾಗಿದೆ ಎಂದರು.
ಮೊದಲಿಗೆ ಎಂ.ಎ.ವಸಂತ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಎನ್‌ಸಿಯ ಸದಸ್ಯರಾದ ಪಿ.ಕೆ.ಮುತ್ತಣ್ಣ, ಎಂ.ಎ.ಉತ್ತಪ್ಪ, ಕೆ.ಜಿ.ಮುತ್ತಣ್ಣ, ಪಿ.ಎನ್.ಬೋಪಣ್ಣ, ಡಿ.ಸಿ.ದೇವಯ್ಯ, ಪುಲ್ಲೇರ ಕಾಳಪ್ಪ , ಪಿ.ಎಂ. ರಂಜಿತ್ ಕಾರ್ಯಪ್ಪ ಹಾಗೂ ಇತರರು ಇದ್ದರು.
ಕನ್ನಡ ವೃತ್ತದಲ್ಲಿ ಸಿಎನ್‌ಸಿಯ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಕೂಗಿದರು. ಸುಂಟಿಕೊಪ್ಪ ಪಿಎಸ್‌ಐ ಮೋಹನ್‌ರಾಜ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಭೂಮಿ ಪರಭಾರೆ ಮಾಡಬೇಡಿ ಅರಣ್ಯ ನಾಶಕ್ಕೆ ಕೊಡವರು ಕಾರಣರಲ್ಲ ಭೂಕುಸಿತಕ್ಕೆ ಕಡಿವಾಣ ಹಾಕಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.