ಸೋಮವಾರಪೇಟೆ ಯಂಗ್ ಇಂಡಿಯನ್ ಫಾರ್ಮರ್ಸ್ ವತಿಯಿಂದ ಕಾಫಿ ಮಂಡಳಿಗೆ ಸ್ವಂತ ಕಟ್ಟಡ ಸೇರಿದಂತೆ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸಂಸದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಮೈಸೂರಿನ ಸಂಸದರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು
ಸೋಮವಾರಪೇಟೆ: ಜಿಲ್ಲೆಯ ಕಾಫಿ ಪ್ರಮುಖ ಬೆಳೆಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ಕಾಫಿ ಮಂಡಳಿ ಕಚೇರಿಗೆ ಸ್ವಂತ ಕಟ್ಟಡವಿಲ್ಲದಿರುವ ಹಿನ್ನೆಲೆ ಸ್ವಂತ ಕಚೇರಿ ಹಾಗೂ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕೆಂದು ತಾಲ್ಲೂಕಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಶಿಯೇಷನ್ ವತಿಯಿಂದ ಗುರುವಾರ ಸಂಸದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಸಂಸದರ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಕಾಫಿ ಉತ್ಪತ್ತಿಯು ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೊಡಗು ಜಿಲ್ಲೆಯ ಶೇ90ಕ್ಕೂ ಹೆಚ್ಚಿನ ರೈತರು ಕಾಫಿ ಬೆಳೆಗಾರರಾಗಿದ್ದಾರೆ. ಆದರೆ ಸೋಮವಾರಪೇಟೆಯಲ್ಲಿ ಹಲವಾರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕಾಫಿ ಮಂಡಳಿ ಕಚೇರಿಗೆ ಇನ್ನೂ ಸ್ವಂತ ಕಟ್ಟಡವಿಲ್ಲದೆ, ಖಾಸಗಿ ಕಟ್ಟಡದಲ್ಲಿ ಬಾಡಿಗೆ ಪಾವತಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಕಾಫಿ ಕೃಷಿಕರ ಅನುಕೂಲ ಹಾಗೂ ಹಿತದೃಷ್ಟಿಯಿಂದ ಕಾಫಿ ಮಂಡಳಿಯನ್ನು ಉನ್ನತಿಕರಿಸಬೇಕಾದ ಅಗತ್ಯವಿದೆ. ಕಾಫಿ ಮಂಡಳಿ ಕಚೇರಿಗೆ ಸ್ವಂತ ಕಟ್ಟಡದೊಂದಿಗೆ ಅಧಿಕಾರಿಗಳ ವಸತಿ ಗೃಹ, ಪ್ರಯೋಗಾಲಯ, ಸಭಾಂಗಣ, ಅತಿಥಿ ಗೃಹ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲು ಕಾಫಿ ಮಂಡಳಿಯೊಂದಿಗೆ ಚರ್ಚಿಸಿ ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದರಿಗೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಂಸದ, ಈ ಕುರಿತಾಗಿ ಶೀಘ್ರದಲ್ಲೇ ಸಂಬಂದಿಸಿದ ಕಾಫಿ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಸಂಘಟನೆಯ ಕಾರ್ಯದರ್ಶಿ ಸಜನ್ ಮಂದಣ್ಣ, ಜನಾರ್ದನ್, ಅಭಿಷೇಕ್ ಗೋವಿಂದಪ್ಪ, ಲಕ್ಷ್ಮಿಕಾಂತ್ ಕೊಮಾರಪ್ಪ, ಆದರ್ಶ್ ತಮ್ಮಯ್ಯ, ಪ್ರೇಮ್ ಸಾಗರ್, ವಿನಯ್ ಕುಶಾಲಪ್ಪ, ಆಶೀತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.