ADVERTISEMENT

ಸೋಮವಾರಪೇಟೆ | ಬೆಳೆ ಹಾನಿ: ವೈಜ್ಞಾನಿಕ ಸರ್ವೆಗೆ ರೈತರ ಆಗ್ರಹ

ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಇಲಾಖೆಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:43 IST
Last Updated 10 ಸೆಪ್ಟೆಂಬರ್ 2025, 7:43 IST
ಸೋಮವಾರಪೇಟೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅಧ್ಯಕ್ಷ ಮಂಜುನಾಥ್ ಮಾತನಾಡಿದರು. ಸತೀಶ್ ಕುಮಾರ್, ಲಿಖಿತಾ, ರೋಹಿಣಿ, ನವೀನ್ ಇದ್ದಾರೆ
ಸೋಮವಾರಪೇಟೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅಧ್ಯಕ್ಷ ಮಂಜುನಾಥ್ ಮಾತನಾಡಿದರು. ಸತೀಶ್ ಕುಮಾರ್, ಲಿಖಿತಾ, ರೋಹಿಣಿ, ನವೀನ್ ಇದ್ದಾರೆ   

ಸೋಮವಾರಪೇಟೆ: ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ಕಾಫಿ ಮಂಡಳಿಯಿಂದ ವೈಜ್ಞಾನಿಕ ಸರ್ವೆ ಮಾಡಬೇಕು. ಕಾಟಾಚಾರದ ಸರ್ವೆಯಿಂದ, ಅನೇಕ ವರ್ಷಗಳಿಂದ ರೈತರು ಸೂಕ್ತ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. 

ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ, ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ರೈತರು ಇಲಾಖೆಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಮೇ ತಿಂಗಳಿನಿಂದ ನಿರಂತರವಾಗಿ ಸುರಿದ ಮುಂಗಾರು ಮಳೆಯಿಂದ ಕಾಫಿ, ಕಾಳುಮೆಣಸು ಸೇರಿ ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಲೇಬೇಕು ಎಂದು ರೈತರು ಒತ್ತಾಯಿಸಿದರು.

ADVERTISEMENT

ತಾಲ್ಲೂಕಿನ ಎಲ್ಲ ಹೋಬಳಿಯಲ್ಲೂ ಶೇ 60ರಷ್ಟು ಫಸಲು ಹಾನಿಯಾಗಿದೆ. ಜೂನ್, ಜುಲೈ ತಿಂಗಳಿನಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ಆ ಸಂದರ್ಭದಲ್ಲೇ ಬೆಳೆಹಾನಿಯ ಸರ್ವೆ ಕಾರ್ಯ ನಡೆಯಬೇಕಿತ್ತು ಎಂದು ಕೃಷಿಕರಾದ ಎಸ್.ಬಿ. ಭರತ್ ಕುಮಾರ್, ಜಿ.ಎಂ. ಹೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. 

ಬೆಳೆಹಾನಿ ಸರ್ವೆಗೆ ಕಂದಾಯ, ಕೃಷಿ, ಕಾಫಿ ಮಂಡಳಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಸದ್ಯದಲ್ಲೇ ಸರ್ವೆ ಕಾರ್ಯ ನಡೆಯಲಿದೆ ಎಂದು ಗ್ರಾಮ ಲೆಕ್ಕಿಗರಾದ ಚಂದನ್ ಸಭೆಯಲ್ಲಿ ಮಾಹಿತಿ ನೀಡಿದರು.

ಕಾಫಿ ಆಹಾರ ಬೆಳೆಯೆಂದು ಘೋಷಣೆಯಾಗಬೇಕಿದೆ. ಕಳೆದ ಹಲವಾರು ವರ್ಷಗಳಿಂದ ಕಾಫಿ ಕೃಷಿ ನಷ್ಟದ ಹಾದಿಯಲ್ಲಿದೆ. ಅಕಾಲಿಕ ಮಳೆ, ಅತೀವೃಷ್ಟಿಯಿಂದ ಕಾಫಿ ಫಸಲನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಕಾಫಿ ಬೆಳೆಗಾರರ 10 ಎಚ್‌ಪಿ ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು. ಬಾಕಿಯಿರುವ ಪಂಪ್‌ಸೆಟ್‌ಗ ವಿದ್ಯುತ್ ಬಿಲ್ ಮನ್ನಾ ಮಾಡಬೇಕು. ಈ ವಿಷಯದಲ್ಲಿ ಸಭೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು. ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೆಸ್ಕ್ ಸಿಬ್ಬಂದಿ ಮುಂದಾಗಬಾರದು ಎಂದು ಕಾಫಿ ಬೆಳೆಗಾರರು ಒತ್ತಾಯಿಸಿದರು.

ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ನೋಡೆಲ್ ಅಧಿಕಾರಿ ಸತೀಶ್ ಕುಮಾರ್ ಸಭೆಗೆ ತಿಳಿಸಿದರು.

ಹಲವು ವರ್ಷಗಳಿಂದ ಉಚಿತ ವಿದ್ಯುತ್‌ಗೆ ರೈತರಿಂದ ಹೋರಾಟ ನಡೆಯುತ್ತಿದೆ. ಸರ್ಕಾರ ಹಾಗೂ ಇಲಾಖೆಯ ಆದೇಶಗಳನ್ನು ಪರಿಪಾಲಿಸುವುದು ಸೆಸ್ಕ್ ಸಿಬ್ಬಂದಿ ಕರ್ತವ್ಯ. ಸರ್ಕಾರದ ಮಟ್ಟದಲ್ಲಿ ಕಾಫಿ ಬೆಳೆಗಾರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸೆಸ್ಕ್ ಎಂಜಿನಿಯರ್ ಸುದೀಪ್ ಹೇಳಿದರು.

ಕಾಡುಕೋಣಗಳಿಂದ ಕೃಷಿ ಫಸಲನ್ನು ರಕ್ಷಿಸಿಕೊಳ್ಳುವುದು ಅಸಾಧ್ಯವಾಗಿದೆ. ಅರಣ್ಯ ಇಲಾಖೆಯವರು ಮೀಸಲು ಅರಣ್ಯದ ಸುತ್ತ ಸೋಲಾರ್ ಬೇಲಿ ಹಾಕಬೇಕು. ಇರುವ ಆನೆ ಕಂದಕ ಮತ್ತು ಸೋಲಾರ್ ತಂತಿಬೇಲಿಯನ್ನು ದುರಸ್ತಿಗೊಳಿಸಬೇಕು ಎಂದು ಹಿರಿಕರ ವಸಂತ್ ಆಗ್ರಹಿಸಿದರು.

ಅರಣ್ಯದ ಸುತ್ತ ತಂತಿ ಬೇಲಿಯನ್ನು ಸರಿಪಡಿಸುವ ಕೆಲಸ ಮುಂದುವರಿದಿದೆ ಎಂದು ಡಿಆರ್‌ಎಫ್ಒ ಮಲ್ಲೇಶ್ ಹೇಳಿದರು.

ಉಪಾಧ್ಯಕ್ಷೆ ರೋಹಿಣಿ, ನವೀನ್ ಕುಮಾರ್, ನಾಗರಾಜು, ಸುಮಾ, ಮಲ್ಲಿಕಾ, ವಿಶಾಲಾಕ್ಷಿ, ಗೌರಿ, ಸಿ.ಈ. ವೆಂಕಟೇಶ್, ಗಣೇಶ್, ಪಿಡಿಒ ಲಿಖಿತಾ ಇದ್ದರು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಜಲಜೀವನ್‌ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹ ಜಲಜೀವನ್ ಮಿಷನ್ ವತಿಯಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆ ವಿಫಲವಾಗಿದ್ದು ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅನೇಕ ಗ್ರಾಮಸ್ಥರು ಆಗ್ರಹಿಸಿದರು. ಶುಂಠಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಜೆಜೆಎಂ ನೀರಿನ ಟ್ಯಾಂಕ್ ಕಾಮಗಾರಿ ಕಳಪೆಯಾಗಿದೆ. ನೀರು ಕುಡಿಯುವ ಭಾಗ್ಯ ಇನ್ನು ಸಿಕ್ಕಿಲ್ಲ. ಕೂಡಲೇ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಭರತ್ ಕುಮಾರ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.