ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ಕಾಫಿ ಬೆಳೆ ಹಾಳಾಗಿರುವ ಕುರಿತು ಕಾಫಿ ಮಂಡಳಿಯು ಸಮೀಕ್ಷೆ ಕೈಗೊಂಡಿದೆ.
ಮಡಿಕೇರಿ ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಗಾಗಲೇ ಸಮೀಕ್ಷಾ ಕಾರ್ಯ ಕೈಗೊಂಡಿದ್ದು, ಪೂರ್ಣಗೊಂಡ ನಂತರ ವರದಿಯನ್ನು ಮಂಡಳಿಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
‘ಇದಕ್ಕಾಗಿ ಮಂಡಳಿಯ ಸಂಶೋಧನಾ ಮತ್ತು ವಿಸ್ತರಣಾ ವಿಭಾಗದ ಸಿಬ್ಬಂದಿಯನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುವುದು. ಬಹುಬೇಗ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲಾಗುವುದು’ ಎಂದು ಮಂಡಳಿಯ ಉಪನಿರ್ದೇಶಕ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯ, ಬಿದ್ದಿರುವ ಮಳೆಯಿಂದ ಕಾಫಿಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸುವ ಕಡೆಗೆ ಬೆಳೆಗಾರರು ಮೊದಲು ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಎಲ್ಲ ಕಾಯಿಗಳೂ ಹಣ್ಣಾಗುವವರೆಗೆ ಕಾಯದೇ ಸದ್ಯ ಹಣ್ಣಾಗಿರುವುದನ್ನೆಲ್ಲ ಕೀಳಬೇಕು. ಇದಕ್ಕಾಗಿ ಕಾರ್ಮಿಕರ ವೆಚ್ಚ ಅಧಿಕವಾದರೂ ಅನಿವಾರ್ಯವಾಗಿ ಈ ಕೆಲಸ ಮಾಡಬೇಕಿದೆ. ಇಲ್ಲದೇ ಹೋದರೆ, ಈಗ ಹಣ್ಣಾಗಿರುವುದೆಲ್ಲ ಬಹುಬೇಗನೆ ಬಿದ್ದು ಹೋಗುವ ಸಾಧ್ಯತೆ ಇದೆ.
ಹಣ್ಣುಗಳನ್ನು ಕಣದಲ್ಲಿ ಒಣಗಲು ಬಿಡಬೇಕು. ಟಾರ್ಪಲಿನ್ ಹಾಕಿ ವ್ಯವಸ್ಥಿತವಾಗಿ ಮುಚ್ಚಬೇಕು. ಮಳೆ ನೀರು ಒಳ ಸೇರದಂತೆ ಎಚ್ಚರ ವಹಿಸಬೇಕು. ಸಾಧ್ಯವಾದರೆ ಒಣಗಿಸುವ ಯಂತ್ರಗಳಿದ್ದರೆ ಹಣ್ಣುಗಳನ್ನು ಅದರಲ್ಲಿ ಹಾಕಿ ಒಣಗಿಸುವುದು ಉತ್ತಮ.
ಮುಖ್ಯವಾಗಿ, ಹಣ್ಣುಗಳ ಗುಣಮಟ್ಟ ಕಾಪಾಡಿಕೊಳ್ಳುವುದರತ್ತ ಹೆಚ್ಚಿನ ಗಮನ ಕೊಡಬೇಕಿದೆ. ಉತ್ತಮ ಬೆಲೆ ಸಿಗಲು ಇದು ಮುಖ್ಯ ಕಾರಣ ಎಂದು ಅವರು ಹೇಳಿದ್ದಾರೆ.
ಕಾಯಿ ಕೊರಕದ ಬಾಧೆ; ಎಚ್ಚರಿಕೆ
ಮಾಗಿರುವ ಹಣ್ಣುಗಳು ಕೆಳಗೆ ಉದುರಿ ಹೋದರೆ ಅವುಗಳನ್ನು ಹಾಗೆ ಬಿಡದೇ ಕೂಡಲೇ ತೆಗೆಸಬೇಕು. ಇಲ್ಲದೇ ಹೋದರೆ, ಕಾಯಿಕೊರಕದ ಹುಳು ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಎಲ್ಲೆಲ್ಲಿ ಕಾಯಿಕೊರಕದ ಹುಳು ಬಾಧೆ ಕಂಡು ಬಂದಿದೆಯೋ ಆ ಭಾಗದ ಬೆಳೆಗಾರರಿಗೆ ಕಾಯಿಕೊರಕದ ಹುಳು ನಿಯಂತ್ರಣಕ್ಕೆ ‘ಮೋಹಕ ಬಲೆ’ಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಬೆಳೆಗಾರರು ಸಮೀಪದ ಮಂಡಳಿಯ ಕಚೇರಿಯನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.
ಇಳುವರಿ ಕುಸಿತ
ಬಹುತೇಕ ಎಲ್ಲೆಡೆ ಕಾಫಿ ಇಳುವರಿ ಕುಸಿತವಾಗುವ ಭೀತಿ ಮೂಡಿದೆ. ಈಗಾಗಲೇ ಶನಿವಾರಸಂತೆಯಲ್ಲಿ ಕೊಯ್ಲು ನಡೆಸಿದ ಬೆಳೆಗಾರ ಸೋಮಶೇಖರ್ ಪ್ರತಿಕ್ರಿಯಿಸಿ, ‘2.5 ಎಕರೆಗೆ 5 ಸಾವಿರ ಕೆ.ಜಿ ಕಾಫಿ ಹಣ್ಣಿನ ಇಳುವರಿಯನ್ನು ಅಂದಾಜು ಮಾಡಲಾಗಿತ್ತು. ಆದರೆ, ಅಕಾಲಿಕ ಮಳೆಯಿಂದ ಹಣ್ಣುಗಳೆಲ್ಲ ಉದುರಿ, ಕೆಲವು ಗಿಡದಲ್ಲೇ ಕೊಳೆತು, ಸದ್ಯ 3,200 ಕೆ.ಜಿಯಷ್ಟೇ ಸಿಕ್ಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬೆಳೆ ಮಾತ್ರವಲ್ಲ ಮುಂದಿನ ಬೆಳೆಯೂ ನಷ್ಟ!: ಈಗ ಸುರಿದಿರುವ ಮಳೆಯು ಕೇವಲ ಈಗಿನ ಕಾಫಿ ಇಳುವರಿಯ ಮೇಲಷ್ಟೇ ಪರಿಣಾಮ ಬೀರಿಲ್ಲ. ಇದು ಮುಂಬರುವ ಕಾಫಿಯ ಇಳುವರಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ರೊಬಸ್ಟಾ ಗಿಡಗಳಲ್ಲಿ ಈಗಾಗಲೇ ಹೂವುಗಳು ಅರಳಿವೆ. ಹಲವೆಡೆ ಮೊಗ್ಗು ಕಟ್ಟಿವೆ. ಮಾರ್ಚ್ ತಿಂಗಳಲ್ಲಿ ಈ ಸನ್ನಿವೇಶ ಬರಬೇಕಿತ್ತು. ಆದರೆ, ಈಗ ಜನವರಿ ಆರಂಭದಲ್ಲೇ ಹೂವು ಅರಳಿರುವುದರಿಂದ ಅದು ಮುಂದಿನ ಬೆಳೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಂಭವವಿದೆ.
ಅಕಾಲಿಕ ಮಳೆಯಿಂದ ಕಾಫಿಗೆ ಉಂಟಾಗಿರುವ ಹಾನಿಯ ಕುರಿತು ಸಮೀಕ್ಷೆ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಅದನ್ನು ಪೂರ್ಣಗೊಳಿಸಲಾಗುವುದುಚಂದ್ರಶೇಖರ್ ಕಾಫಿ ಮಂಡಳಿಯ ಉಪನಿರ್ದೇಶಕ ಮಡಿಕೇರಿ
ಸದ್ಯ ಬಂದಿರುವ ಮಳೆಯಿಂದ ಅಪಾರ ನಷ್ಟ ಸಂಭವಿಸಿದೆ. ಸರ್ಕಾರ ಕೂಡಲೇ ಕಾಫಿ ಬೆಳೆಗಾರರ ರಕ್ಷಣೆಗೆ ಧಾವಿಸಬೇಕು. ಸಾಲ ಮನ್ನಾ ಮಾಡಿ ಸಹಾಯಧನ ನೀಡಬೇಕುಕೂಗೂರು ಸೋಮಶೇಖರ್ ಶನಿವಾರಸಂತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.