ಸೋಮವಾರಪೇಟೆ: ತಾಲ್ಲೂಕಿನ ಹೆಗ್ಗುಳ ಗ್ರಾಮದ ಗ್ರಾಮಸ್ಥರು ಶ್ರೀ ತಿರುಮಲ ದೇವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ ಸಾಮೂಹಿಕ ನಾಟಿ ಕಾರ್ಯವನ್ನು ಬುಧವಾರ ನಡೆಸಿದರು.
‘ಕಳೆದ ಹಲವು ವರ್ಷಗಳಿಂದ ಊರಿನ ಗದ್ದೆಯಲ್ಲಿ ಸಾಮೂಹಿಕವಾಗಿ ಭತ್ತದ ನಾಟಿ ಮಾಡಿಕೊಂಡು ಬರುತ್ತಿದ್ದೇವೆ. ಮೊದಲ ದಿನ ಮನೆಗೆ ಒಬ್ಬರಂತೆ ಗದ್ದೆಗೆ ಆಗಮಿಸಿ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. 3.25 ಎಕರೆ ಗದ್ದೆಯಲ್ಲಿ ಬಂದ ಲಾಭವನ್ನು ಗ್ರಾಮದ ದೇವರ ಹರಿಸೇವೆ, ಅರ್ಚಕರ ಸಂಬಳ ಸೇರಿ ವರ್ಷದ ಖರ್ಚನ್ನು ಭರಿಸಲಾಗುವುದು’ ಎಂದು ಗ್ರಾಮ ಸಮಿತಿ ಅಧ್ಯಕ್ಷ ಮುಖಂಡ ಎಚ್.ಕೆ. ತಮ್ಮೇಗೌಡ ತಿಳಿಸಿದರು.
‘ಎಲ್ಲರೂ ಸಮಯಕ್ಕೆ ಆಗಮಿಸಿ, ಸಾಮೂಹಿಕ ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಾಗಿ ಸೇರಿ ಊಟವನ್ನು ಮಾಡುವ ವ್ಯವಸ್ಥೆ ಇದ್ದು, ಗ್ರಾಮದಲ್ಲಿ ಒಗ್ಗಟ್ಟನ್ನು ಕಾಪಾಡಿಕೊಂಡು ಬರಲಾಗುತ್ತಿದೆ’ ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಎಚ್.ಡಿ. ಬಸವರಾಜು ಮಾತನಾಡಿ, ‘ಕಳೆದ 25 ವರ್ಷಗಳಿಂದ ಗ್ರಾಮಸ್ಥರು ಒಟ್ಟಿಗೆ ಸೇರಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡುತ್ತಿದ್ದೇವೆ. ಎಲ್ಲ ಕೆಲಸವನ್ನು ನಾವೇ ಮಾಡಿ ಅದಕ್ಕೆ ತಗಲುವ ಖರ್ಚನ್ನು ಗ್ರಾಮಸ್ಥರೇ ಭರಿಸುತ್ತೇವೆ. ದೇವಾಲಯಕ್ಕೆ ಬೇರೆ ಆದಾಯದ ಮೂಲ ಇಲ್ಲದಿರುವುದರಿಂದ ನಾವು ಒಂದಾಗಿ ಕೆಲಸ ಮಾಡಿ, ದೇವಾಲಯದ ವೆಚ್ಚಕ್ಕೆ, ಈ ಗದ್ದೆಯಲ್ಲಿ ಸಿಗುವ ಭತ್ತವನ್ನು ಮಾರಿ, ಅದರಿಂದ ಬರುವ ಸುಮಾರು ₹1.50 ಲಕ್ಷದಲ್ಲಿ ದೇವಾಲಯದ ಅಭಿವೃದ್ಧಿ ಮತ್ತು ವಾರ್ಷಿಕ ಖರ್ಚಿಗೆ ಬಳಸುತ್ತೇವೆ’ ಎಂದು ತಿಳಿಸಿದರು.
ನಾಟಿ ಮಾಡುವ ಸಂದರ್ಭ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಡಿ. ಚೇತನ, ಖಜಾಂಚಿ ಉಮೇಶ್, ಪದಾಧಿಕಾರಿ ಎಚ್.ಎಚ್. ನವೀನ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.