ಕುಶಾಲನಗರ: ಇಲ್ಲಿನ ಕೊಡಗು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಕೋರ್ಸ್‌ಗಳು ಆರಂಭಗೊಂಡಿವೆ.
ಕೊಡಗು ವಿಶ್ವವಿದ್ಯಾಲಯ, ಬೆಂಗಳೂರಿನ ಇನ್‌ಟೆಲ್ ಸಂಸ್ಥೆ ಹಾಗೂ ರೀಚ್‌ಮಚ್ ಹೈಯರ್ ಅಕಾಡೆಮಿ ಫೌಂಡೇಶನ್ ವತಿಯಿಂದ ಈ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.
ಅನುದಾನಗಳ ಕೊರತೆಗಳ ನಡುವೆಯೂ ಈ ಕೋರ್ಸ್‌ಗಳನ್ನು ಆರಂಭಿಸಿರುವುದಕ್ಕೆ ಸ್ವತಃ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ. ಡಾ.ಮಂತರ್‌ಗೌಡ ಸಹ ವಿಶ್ವವಿದ್ಯಾಲಯದ ಕಾರ್ಯವನ್ನು ಶ್ಲಾಘಿಸಿ, ‘ವಿದ್ಯಾಭ್ಯಾಸದ ಜೊತೆಗೆ ಕೌಶಲಾಭಿವೃದ್ಧಿಗೆ ಅನುವು ಮಾಡಿಕೊಡುವಂತಹ ಅವಕಾಶ ದೊರೆಯುವುದು ಬಹಳ ವಿರಳ. ಆದರೆ, ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಮೂಲ ಕೋರ್ಸ್‌ಗಳ ಜೊತೆಗೆ ಹೆಚ್ಚುವರಿಯಾಗಿ ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿರುವುದು ಶ್ಲಾಘನೀಯ’ ಎಂದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಮಾತನಾಡಿ, ‘ಕೊಡಗು ವಿಶ್ವವಿದ್ಯಾಲಯವು ಸ್ಥಾಪನೆಯಾಗಿ 2 ವರ್ಷಗಳು ತುಂಬುತ್ತಿದ್ದು, ಈ ಅವಧಿಯಲ್ಲಿ ಬಹಳಷ್ಟು ಶೈಕ್ಷಣಿಕ ಪ್ರಗತಿದಾಯಕ ಯೋಜನೆಗಳನ್ನು ರೂಪಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದೆ. ವಿವಿಧ ಪ್ರತಿಷ್ಠಿತ ಸಂಘ ಸಂಸ್ಥೆಗಳ ಜೊತೆಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಂಡು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಗೆ ಹಲವಾರು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ಇದೇ ವೇಳೆ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದ ಬೋಧಕ ವೃಂದಕ್ಕೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ವೇಳೆ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಎಂ.ಸುರೇಶ್, ಸಿಂಡಿಕೇಟ್ ಸದಸ್ಯ ಡಾ.ಕಾವೇರಪ್ಪ, ರೀಚ್‌ಮಚ್ ಹೈಯರ್ ಅಕಾಡೆಮಿ ಫೌಂಡೇಶನ್‌ನ ಹಿರಿಯ ಸಲಹೆಗಾರ ಡಾ.ಓಂಪಕ್ರಾಶ್ ಗೋಯಲ್ ಹಾಗೂ ಸಚಿವರ ಆಪ್ತಕಾರ್ಯದರ್ಶಿ ವೀರಭದ್ರ ಹಂಚಿನಾಳ ಭಾಗವಹಿಸಿದ್ದರು. ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸಕ ಡಾ. ಜಮೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.