ADVERTISEMENT

ಅಧಿಕಾರಿಗಳಿಂದ ಗೂಂಡಾವರ್ತನೆ ಆರೋಪ

ನಿವೇಶನಕ್ಕಾಗಿ ಹೋರಾಟ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 14:19 IST
Last Updated 7 ಫೆಬ್ರುವರಿ 2020, 14:19 IST

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಬಾಳುಗೋಡುವಿನಲ್ಲಿ ಕಳೆದ 35 ದಿನಗಳಿಂದ ನಿವೇಶನಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರ ಮೇಲೆಯೇ ಕ್ರಿಮಿನಲ್‌ ಕೇಸು ದಾಖಲಿಸುವ ಮೂಲಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗೂಂಡಾವರ್ತನೆತೋರಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸಂಚಾಲಕ ನಿರ್ವಾಣಪ್ಪ ದೂರಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಾಯಕರ ಮೇಲೆ ದಬ್ಬಾಳಿಕೆ ನಡೆಸಿರುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೂಲಿ ಕಾರ್ಮಿಕರು, ಆದಿವಾಸಿ, ದಲಿತರು ಬಾಳುಗೋಡುವಿನಲ್ಲಿ 37 ಎಕರೆ ಭೂಮಿಯಲ್ಲಿ ನಿವೇಶನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದೆ. 35 ದಿನಗಳಿಂದ ಶೆಡ್ ನಿರ್ಮಿಸಿಕೊಂಡು ಹೋರಾಟ ಮಾಡಲಾಗುತ್ತಿತ್ತು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಏಕಾಏಕಿ ಗುಡಿಸಲುಗಳನ್ನು ಗೂಂಡಾಗಳ ರೀತಿ ತೆರವುಗೊಳಿಸಿದ್ದಾರೆ. ಅಧಿಕಾರಿಗಳೇ ಹೋರಾಟಗಾರರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ದೂರಿದರು.

ADVERTISEMENT

ನಿವೇಶನ ರಹಿತ 70ಕ್ಕೂ ಹೆಚ್ಚು ಕುಟುಂಬಗಳು ಜಾಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಕ್ಕುಪತ್ರ ನೀಡುವಂತೆ ನ್ಯಾಯಯುತ ಬೇಡಿಕೆ ಸಲ್ಲಿಸಿದ್ದಾರೆ. 37 ಎಕರೆ ಜಾಗದಲ್ಲಿ 34 ಎಕರೆ ಪ್ರದೇಶವು ಉಳ್ಳವರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಪ್ರಶ್ನಿಸದ ಅಧಿಕಾರಿಗಳು ಬಡವರ ಮೇಲೆ ದೌರ್ಜನ್ಯ ಸಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಾಲಸುಬ್ರಮಣ್ಯಂ ಆಯೋಗದ ವರದಿ ಪ್ರಕಾರ ಜಿಲ್ಲೆಯಲ್ಲಿ 1 ಲಕ್ಷ ಎಕರೆ ಭೂಪ್ರದೇಶ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗುವುದಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ಉಳ್ಳವರ ಚೇಲಾಗಳಂತೆವರ್ತಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಹೋರಾಟಗಾರರಮೇಲೆ ದಬ್ಬಾಳಿಕೆ ನಡೆಸಿ ಗುಡಿಸಲು ನಾಶ ಪಡಿಸಿದ ಪೊಲೀಸ್ ಸಿಬ್ಬಂದಿಗಳು, ತಹಶೀಲ್ದಾರ್ ಹಾಗೂ ಕಂದಾಯ ಪರಿವೀಕ್ಷಕ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ವಾಣಪ್ಪ ಆಗ್ರಹಿಸಿದರು.

ಸಮಿತಿ ರಾಜ್ಯ ಸಮಿತಿ ಸದಸ್ಯ ಮೊಣ್ಣಪ್ಪ ಮಾತನಾಡಿ, ಗುಡಿಸಲು ತೆರವು ಮಾಡುವಾಗ ಯಾವುದೇ ಆದೇಶವನ್ನು ಅಧಿಕಾರಿಗಳು ತೋರಿಸಿಲ್ಲ. ಪೆನ್, ಪೇಪರ್ ಹಿಡಿಯುವ ಕೈಗಳು ಕತ್ತಿ, ಕೊಡಲಿ ಹಿಡಿದು ಶೆಡ್‌ಗಳನ್ನು ನಾಶ ಮಾಡಿದ್ದಾರೆ. ಆದಿವಾಸಿಗಳು, ದಲಿತರ ಮೇಲೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದಾರೆ ಎಂದು ದೂರಿದರು.

ಶೋಭಾ ಮಾತನಾಡಿ, ಕಳೆದ 10 ವರ್ಷಗಳಿಂದಲೂನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇವೆ. ಯಾರು ಕೂಡ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಷ್ಟಪಟ್ಟು ನಿರ್ಮಿಸಿದ ಮನೆ ತೆರವುಗೊಳಿಸಿ, ಆಶ್ರಯ ಇಲ್ಲದಂತೆ ಜಿಲ್ಲಾಡಳಿತ ಮಾಡಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಅಶ್ವಿನಿ, ಹರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.