ADVERTISEMENT

ಕೊಡಗಿನಲ್ಲಿ ಮುಂದುವರಿದ ಹುಲಿ ದಾಳಿ, ಹೆಚ್ಚಿದ ಆತಂಕ

ಬಾಲಕ ಬಲಿ, ಮತ್ತೊಬ್ಬರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 6:53 IST
Last Updated 8 ಮಾರ್ಚ್ 2021, 6:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೊಡಗಿನ ದಕ್ಷಿಣ ಭಾಗದಲ್ಲಿ ನರಭಕ್ಷಕ ಹುಲಿಯ ದಾಳಿ ಮುಂದುವರಿದಿದ್ದು, 15 ದಿನಗಳ ಅಂತರದಲ್ಲಿ ಮೂರನೇ ಬಲಿಯಾಗಿದೆ.

ಪೊನ್ನಂಪೇಟೆಯ ಬೆಳ್ಳೂರು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಅಜ್ಜ ಹಾಗೂ ‌ಮೊಮ್ಮಗನ‌ ಮೇಲೆ ಹುಲಿ ದಾಳಿ ನಡೆಸಿದ್ದು, 8 ವರ್ಷದ ರಂಗಸ್ವಾಮಿ ಸಾವನ್ನಪ್ಪಿದ್ದಾನೆ. ಅಜ್ಜ ಕೆಂಚ (50) ಅವರ ಸ್ಥಿತಿ ಗಂಭೀರವಾಗಿದೆ. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಮೈಸೂರಿಗೆ ಕಳುಹಿಸಲಾಗಿದೆ. ಜನರು ಹಾಗೂ ಜಾನುವಾರುಗಳ ಮೇಲೆ ಹುಲಿಯು ನಿರಂತರ ದಾಳಿ ನಡೆಸುತ್ತಿದ್ದು, ಆತಂಕ ಹೆಚ್ಚಾಗಿದೆ.

ಕಳೆದ 10 ದಿನಗಳಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದರೂ, ನರಭಕ್ಷಕ ಹುಲಿ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಶ್ರೀಮಂಗಲ, ನಿಟ್ಟೂರು, ಬಾಳೆಲೆ, ಬೆಳ್ಳೂರು, ಪೊನ್ನಂಪೇಟೆ ಭಾಗದಲ್ಲಿ ಮತ್ತಿಗೋಡು ಶಿಬಿರದ ಎರಡು ಸಾಕಾನೆ, ಬಂಡೀಪುರದಿಂದ ಕರೆ ತಂದಿರುವ ಶ್ವಾನ ‘ರಾಣಾ’ ನೆರವು ಪಡೆದು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.

ADVERTISEMENT

ಹೆಚ್ಚಿದ ಆಕ್ರೋಶ:ನಿರಂತರ ಹುಲಿ ದಾಳಿಯಿಂದ ಆತಂಕಕ್ಕೆ ಒಳಗಾಗಿರುವ, ಕಾಫಿ ಬೆಳೆಗಾರರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಈ ಕೂಡಲೇ ನರಭಕ್ಷಕ ಹುಲಿ ಸೆರೆ ಹಿಡಿಯಬೇಕು. ಇಲ್ಲವೇ ಗುಂಡಿಕ್ಕಲು ಆದೇಶ ನೀಡಬೇಕು’ ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.