ADVERTISEMENT

ವಿವಾದಕ್ಕೆ ಕಾರಣವಾಯ್ತು ನಾಮಫಲಕ ಅಳವಡಿಕೆ

ರಾಜ್ಯೋತ್ಸವದ ಬೆನ್ನಲ್ಲೇ, ಅಸಮಾಧಾನ; ಕನ್ನಡಪರ ಸಂಘಟನೆಗಳ ವಿರೋಧ; ಪ್ರತಿಭಟನೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 20:04 IST
Last Updated 3 ನವೆಂಬರ್ 2019, 20:04 IST
ನಮ್ಮ ಸುಂಟಿಕೊಪ್ಪ ಬಳಗದ ಲಾಂಛನ
ನಮ್ಮ ಸುಂಟಿಕೊಪ್ಪ ಬಳಗದ ಲಾಂಛನ   

ಸುಂಟಿಕೊಪ್ಪ: ಇಲ್ಲಿನ ಕನ್ನಡ ವೃತ್ತದಲ್ಲಿ ಅಳವಡಿಸಿರುವ ಸ್ಟೀಲ್ ಕಂಬಿಯಿಂದ ರಚಿಸಿದ ಕನ್ನಡ ವರ್ಣಮಾಲೆ ಒಳಗೊಂಡಿರುವ ವೃತ್ತವನ್ನು ಸ್ಥಳೀಯ ಸಂಘಟನೆಯೊಂದು ಅಳವಡಿಸಿದೆ. ಅದಕ್ಕೆ ತನ್ನ ಸಂಘದ ಲಾಂಛನ ಅಳವಡಿಸಿರುವುದನ್ನು ಕನ್ನಡ ಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ತೆರವುಗೊಳಿಸಲು ಒತ್ತಾಯಿಸಿವೆ.

ಇಲ್ಲಿನ ’ನಮ್ಮ ಸುಂಟಿಕೊಪ್ಪ ಬಳಗ‘ ಎಂಬ ಸಂಘಟನೆಯು ಕನ್ನಡ ವೃತ್ತದ ಮೂಲಸ್ವರೂಪಕ್ಕೆ ಧಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ಹೋಬಳಿ ವ್ಯಾಪ್ತಿಯ ದಾನಿಗಳ ಸಹಾಯವನ್ನು ಪಡೆಯಲು ನಿರ್ಧರಿಸಲಾಗಿತ್ತು. ವಂತಿಗೆಯಿಂದ ಸಂಗ್ರಹಿಸಿದ ಮೊತ್ತದಿಂದ ಈ ಸ್ಟೀಲ್ ಕಂಬಿಗಳಿಂದ ರಕ್ಷಣೆ ನೀಡಲಾಯಿತು. ಆದರೆ, ಅದನ್ನು ತಯಾರಿಸುವ ಸಂದರ್ಭ ತಮ್ಮ ಸಂಘಕ್ಕೆ ಸೀಮಿತವಾಗಲಿ ಎನ್ನುವ ದೃಷ್ಟಿಯಿಂದ ತಮ್ಮ ಸಂಘದ ಲಾಂಛನವನ್ನು ಅಳವಡಿಸಿರುವುದು ಕಂಡುಬಂದಿದೆ. ಆ ಬಳಗದ ಸದಸ್ಯರು ಈ ವೃತ್ತಕ್ಕೆ ದಾನಿಗಳ, ಸಂಘಸಂಸ್ಥೆಗಳ ಹೆಸರು ಮತ್ತು ಲಾಂಛನವನ್ನು ಅಳವಡಿಸಬಾರದು ಎಂಬ ನಿರ್ಧಾರಗಳು ಸಭೆಗಳಲ್ಲಿ ನಡೆದಿದ್ದರೂ ಈ ರೀತಿಯಾಗಿ ವರ್ತನೆ ಮಾಡಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ನ.1ರ ಕನ್ನಡ ರಾಜ್ಯೋತ್ಸವದ ಸಂದರ್ಭ ಈ ವಿಷಯದ ಬಗ್ಗೆ ಬಹಳಷ್ಟು ಗೊಂದಲಗಳು ಮೂಡಿದ್ದವು. ಈ ಬಗ್ಗೆ ಸಮಜಾಯಿಷಿ ನೀಡಿ, ಉದ್ಘಾಟನಾ ಕಾರ್ಯ ನೆರವೇರಿಸಿದ್ದವು.

ADVERTISEMENT

ಈ ಬಗ್ಗೆ ಕನ್ನಡ ಸಂಘಟನೆಗಳಿಗೆ ತಿಳಿದು ವಿರೋಧ ವ್ಯಕ್ತಪಡಿಸಬಹುದು ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ತಲೆ ಹೊರೆ ಕನ್ನಡಾಭಿಮಾನಿಗಳ ಸಂಘ, ಕರ್ನಾಟಕ ಕಾವಲು ಪಡೆ, ಪತ್ರಕರ್ತರಿಗೆ ಮಾಹಿತಿ ನೀಡದೇ ಅ.31ರ ರಾತ್ರಿ ಆ ರಕ್ಷಣಾ ವೃತ್ತವನ್ನು ಅಳವಡಿಸಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.

ಕೂಡಲೇ ಈ ವೃತ್ತದ ಸುತ್ತ ಎರಡು ಕಡೆ ಸಂಘಟನೆಯವರು ಅಳವಡಿಸಿರುವ ತಮ್ಮ ಲಾಂಛನವನ್ನು ತೆರವುಗೊಳಿಸಬೇಕು, ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.