ADVERTISEMENT

ರಾಜಾಸೀಟ್‌ ಬಳಿ ‘ಕೂರ್ಗ್ ವಿಲೇಜ್‌’

ಪ್ರವಾಸಿಗರ ಸೆಳೆಯಲು ಪ್ರವಾಸೋದ್ಯಮ ಇಲಾಖೆಯಿಂದ ವಿನೂತನ ಪ್ರಯತ್ನ

ಅದಿತ್ಯ ಕೆ.ಎ.
Published 29 ನವೆಂಬರ್ 2019, 12:58 IST
Last Updated 29 ನವೆಂಬರ್ 2019, 12:58 IST
‘ಕೂರ್ಗ್‌ ವಿಲೇಜ್‌’ ಕಾಮಗಾರಿ
‘ಕೂರ್ಗ್‌ ವಿಲೇಜ್‌’ ಕಾಮಗಾರಿ   

ಮಡಿಕೇರಿ: ‘ಮಂಜಿನ ನಗರಿ’ಯ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ಗೆ ಬರುವ ಪ್ರವಾಸಿಗರಿಗೆ ನಿರಾಸೆ ಆಗುವುದರಲ್ಲಿ ಎರಡು ಮಾತಿಲ್ಲ. ಬರೀ ಉದ್ಯಾನ. ಬೆಟ್ಟಗಳ ಸಾಲು, ಕಲಾಕೃತಿಗಳು... ಅದನ್ನು ಹೊರತು ಪಡಿಸಿದರೆ ಸಂಜೆ ವೇಳೆ ಸಂಗೀತ ಕಾರಂಜಿ. ಸಂಗೀತ ಕಾರಂಜಿಯೂ ಕೆಲವೊಮ್ಮೆ ರಾತ್ರಿಯಾದರೂ ಚಿಮ್ಮುವುದೇ ಇಲ್ಲ! ಈಗ ಆ ಕೊರಗು ನೀಗಿಸಲು ಪ್ರವಾಸೋದ್ಯಮ ಹಾಗೂ ತೋಟಗಾರಿಕೆ ಇಲಾಖೆ ನೂತನ ಪ್ರಯೋಗಕ್ಕೆ ಮುಂದಾಗಿದೆ.

ರಾಜಾಸೀಟ್‌ ಬಳಿಯೇ (ಕುಂದೂರುಮೊಟ್ಟೆ ದೇವಸ್ಥಾನ ಎದುರು) ಇರುವ ತೋಟಗಾರಿಕೆ ಇಲಾಖೆ ಜಾಗದಲ್ಲಿ ‘ಕೂರ್ಗ್‌ ವಿಲೇಜ್‌’ ನಿರ್ಮಾಣ ಮಾಡಲಾಗುತ್ತಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ. ರಸ್ತೆಬದಿಯಲ್ಲಿ ಚಿಕ್ಕದಾದ ಕೆರೆಯನ್ನು ಹೊಂದಿರುವ ತೋಟಗಾರಿಕೆ ಇಲಾಖೆಯ ಜಾಗವು ಇನ್ಮುಂದೆ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗಲಿದೆ.

ಪ್ರವಾಸೋದ್ಯಮ ಇಲಾಖೆಯ ₹ 98 ಲಕ್ಷ ಅನುದಾನದಲ್ಲಿ ಅಂದಾಜು 15 ಮಳಿಗೆಗಳು ನಿರ್ಮಾಣವಾಗಲಿವೆ. ರಾಜಾಸೀಟ್‌, ಓಂಕಾರೇಶ್ವರ ದೇಗುಲ, ಹಳೇ ಕೋಟೆ, ನೆಹರೂ ಮಂಟಪ... ಹೀಗೆ ಸುತ್ತಾಡಿ ಬರುವ ಪ್ರವಾಸಿಗರಿಗೆ ಸಂಜೆಯ ವೇಳೆ ತಂಪಾದ ವಾತಾವರಣ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಪ್ರಯತ್ನಿಸುತ್ತಿದೆ.

ADVERTISEMENT

ಏನೇನು ಇರಲಿದೆ?:ಈ ಪ್ರದೇಶದಲ್ಲಿ ಮೂರು ಕಡೆ ಶಾಪಿಂಗ್‌ ಕಾಂಪ್ಲೆಕ್ಸ್‌ ತಲೆಯೆತ್ತಲಿದೆ. ಒಂದು ಕಡೆ 6, ಒಂದೆ ಕಡೆ 4, ಮತ್ತೊಂದು ಕಡೆ 5 ಮಳಿಗೆಗಳು ನಿರ್ಮಾಣವಾಗುತ್ತಿವೆ. ಈ ಮಳಿಗೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ವಿವಿಧ ಯೋಜನೆಗಳಲ್ಲಿ ತಯಾರಿಸಿದ ವಸ್ತುಗಳು, ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರು ತಯಾರಿಸಿದ ಆಹಾರೋತ್ಪನ್ನಗಳು ಗ್ರಾಹಕರಿಗೆ ಲಭಿಸಲಿವೆ.

ಜತೆಗೆ, ಚಿಕ್ಕದಾದ ಕೆರೆಯಿದ್ದು ಅದನ್ನೂ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವಾಗಿ ರೂಪಿಸುವ ಆಲೋಚನೆ ಇಲಾಖೆ ಮುಂದಿದೆ. ಪಾದಚಾರಿ ಮಾರ್ಗ, ಆಸದ ವ್ಯವಸ್ಥೆ ಸಹ ಮಾಡಲಾಗುವುದು. ರಾಜಾಸೀಟ್‌ಗೆ ಬಂದವರು ಅಗತ್ಯ ಸಾಮಗ್ರಿ ಖರೀದಿಸಿ, ಸ್ವಲ್ಪಹೊತ್ತು ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಲೂ ಅವಕಾಶ ಸಿಗಲಿದೆ ಎಂದು ಹೇಳುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

ಸಂತ್ರಸ್ತರಿಗೆ ಆದ್ಯತೆ:ರಾಜಾಸೀಟ್‌ ಬಳಿಯ ಮಳಿಗೆಗಳನ್ನು ಈ ಸ್ಥಳಕ್ಕೆ ಸ್ಥಳಾಂತರ ಮಾಡುವ ಆಲೋಚನೆ ಸದ್ಯಕ್ಕಿಲ್ಲ. ಸದ್ಯಕ್ಕೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಒಂದೊಂದು ಮಳಿಗೆ ನೀಡಲು ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಅಡಿಪಾಯ ಕೆಲಸ: ತೋಟಗಾರಿಕೆ ಇಲಾಖೆ ಈ ಜಾಗದಲ್ಲಿ ಕಾಂಪ್ಲೆಕ್ಸ್‌ ಅಡಿಪಾಯ ಕಾಮಗಾರಿ ಆರಂಭವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಈ ಸ್ಥಳದಲ್ಲಿ ಮಳಿಗೆಗಳು ಉದ್ಘಾಟನೆಗೆ ಸಜ್ಜಾಗಲಿವೆ ಎಂದು ಕಾರ್ಮಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.