ADVERTISEMENT

ಕೊಡಗು ಜಿಲ್ಲೆಯ ಮೂವರಿಗೆ ಕೋವಿಡ್‌: ಬೆಂಗಳೂರಿಗೆ ಮಾದರಿ ರವಾನೆ

ಜಿನೋಮಿಕ್‌ ಸೀಕ್ವೆನ್ಸ್‌ ವರದಿ ಬರಲು ಕನಿಷ್ಠ ಒಂದು ವಾರ; ಡಿಎಚ್‌ಒ ವೆಂಕಟೇಶ್‌

ಕೆ.ಎಸ್.ಗಿರೀಶ್
Published 6 ಜನವರಿ 2023, 19:30 IST
Last Updated 6 ಜನವರಿ 2023, 19:30 IST
   

ಮಡಿಕೇರಿ: ಕೊಡಗು ಜಿಲ್ಲೆಯ ಮೂವರಲ್ಲಿ ಕೋವಿಡ್‌ ಪತ್ತೆಯಾಗಿದೆ. ಅವರೆಲ್ಲರೂ ಲಘು ಶೀತದಿಂದ ಬಳಲು ತ್ತಿದ್ದು, ಸದ್ಯ ಯಾವುದೇ ಆತಂಕ ಇಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಅವರ ಗಂಟಲು ದ್ರವದ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸ್‌ಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಈಚೆಗೆ ಕಳೆದ ಕೆಲವು ದಿನಗಳಿಂದ 3 ಸಾವಿರ ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಬಹು ತೇಕ ಮಂದಿಯಲ್ಲಿ ಜ್ವರ, ಶೀತದ ಲಕ್ಷಣಗಳಿದ್ದವು. ಆದರೆ, ಕೋವಿಡ್ ಪತ್ತೆಯಾಗಿದ್ದು ಮೂವರಲ್ಲಿ ಮಾತ್ರ.

ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದಲ್ಲಿ ಕೊಡಗು ಜಿಲ್ಲೆಗೆ ಅಸಂಖ್ಯಾತ ಜನರು ಬಂದಿದ್ದರು. ಸುಮಾರು 2 ಲಕ್ಷದಷ್ಟು ಜನರು ಇಲ್ಲಿನ ವಿವಿಧ ಹೋಟೆಲ್‌ಗಳು, ಹೋಂಸ್ಟೇಗಳು, ರೆಸಾರ್ಟ್‌ಗಳಲ್ಲಿ ತಂಗಿದ್ದರು. ಇವರಲ್ಲಿ ಬಹಳಷ್ಟು ಮಂದಿ ಉತ್ತರ ಭಾರತದಿಂದ ಬಂದವರೇ ಇದ್ದರು. ಹೀಗಾಗಿ, ಕೋವಿಡ್‌ ವ್ಯಾಪಕವಾಗಿ ಹರಡುವ ಸಾಧ್ಯತೆಗಳಿವೆ ಎಂಬ ಭೀತಿಯೂ ಮೂಡಿತ್ತು.

ADVERTISEMENT

ಆರೋಗ್ಯ ಇಲಾಖೆಯು ನಡೆಸುತ್ತಿದ್ದ ಕೋವಿಡ್ ಪರೀಕ್ಷೆ ಹೆಚ್ಚಿಸಿತು. ನಿತ್ಯ ನಡೆಸುತ್ತಿದ್ದ ಪರೀಕ್ಷೆಯನ್ನು ದುಪ್ಪಟ್ಟುಗೊಳಿಸಿತು. ಕೋವಿಡ್ ಲಕ್ಷಣಗಳು ಕಂಡು ಬಂದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ‘ಮೂವರು ಕೋವಿಡ್‌ ರೋಗಿಗಳು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಆತಂಕಪಡುವ ಅಗತ್ಯ ಇಲ್ಲ. ಇವರ ಗಂಟಲು ದ್ರವದ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸ್‌ಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಒಂದು ವಾರದ ಬಳಿಕ ವರದಿ ಬರಲಿದ್ದು, ಕೊರೊನಾ ವೈರಸ್‌ನ ತಳಿ ಯಾವುದು ಎಂಬುದು ಗೊತ್ತಾಗಲಿದೆ. ಸದ್ಯ, ಕೊಡಗು ಜಿಲ್ಲೆಯಲ್ಲಿ ಆತಂಕಪಡುವ ಅಗತ್ಯ ಇಲ್ಲ’ ಎಂದು ಹೇಳಿದರು.

ಕೋವಿಶೀಲ್ಡ್‌ ಲಸಿಕೆ; ಸನ್ನಿಹಿತ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕೋವಿಶೀಲ್ಡ್ ಲಸಿಕೆಯ ಲಭ್ಯತೆ ಇರಲಿಲ್ಲ. ಕೊವ್ಯಾಕ್ಸಿನ್ ಮಾತ್ರವೇ ಲಭ್ಯವಿತ್ತು. ಕೋವಿಶೀಲ್ಡ್‌ನ 2ನೇ ಡೋಸೇಜ್ ಲಸಿಕೆ ಪಡೆಯಬೇಕಾದವರು ಹಾಗೂ ಮುನ್ನೆಚ್ಚರಿಕೆ ಡೋಸೇಜ್ ಲಸಿಕೆ ಪಡೆಯ ಬೇಕಾದವರು ಪರದಾಡುವಂತಾಗಿತ್ತು. ಸದ್ಯ, ಕೋವಿಶೀಲ್ಡ್‌ ಒಂದೆರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ.

ಕೋವಿಶೀಲ್ಡ್ ಲಸಿಕೆ ಪಡೆಯಬೇಕಾದವರು ಸಮೀಪದ ಆರೋಗ್ಯ ಕೇಂದ್ರಗಳಿಗೆ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಗೆ ಮಾಹಿತಿ ನೀಡಿದಲ್ಲಿ ಮೊದಲು ಬರುವ ಲಸಿಕೆಗಳನ್ನು ಬೇಡಿಕೆ ಬರುವ ಕಡೆಗೆ ಕಳುಹಿಸಲಾಗುವುದು ಎಂದು ಡಾ.ವೆಂಕಟೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.