ADVERTISEMENT

ಮನಸೂರೆಗೊಂಡ ಮಹಿಳಾ ಸಾಂಸ್ಕೃತಿಕೋತ್ಸವ

ಕಾನೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:45 IST
Last Updated 19 ಡಿಸೆಂಬರ್ 2020, 16:45 IST
ಗೋಣಿಕೊಪ್ಪಲು ಬಳಿಯ ಕಾನೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮಹಿಳಾ ಉತ್ಸವ ಹಾಗೂ ಗಿರಿಜನ ವಿಶೇಷ ಘಟಕ ಸಾಂಸ್ಕೃತಿಕ ಉತ್ಸವದ ಮೆರವಣಿಗೆಯನ್ನು ಸ್ಥಳೀಯ ಮಹಿಳಾ ಸಮಾಜದ ಅಧ್ಯಕ್ಷೆ ಮಾಯಮ್ಮ ಬೋಪಯ್ಯ ಉದ್ಘಾಟಿಸಿದರು
ಗೋಣಿಕೊಪ್ಪಲು ಬಳಿಯ ಕಾನೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮಹಿಳಾ ಉತ್ಸವ ಹಾಗೂ ಗಿರಿಜನ ವಿಶೇಷ ಘಟಕ ಸಾಂಸ್ಕೃತಿಕ ಉತ್ಸವದ ಮೆರವಣಿಗೆಯನ್ನು ಸ್ಥಳೀಯ ಮಹಿಳಾ ಸಮಾಜದ ಅಧ್ಯಕ್ಷೆ ಮಾಯಮ್ಮ ಬೋಪಯ್ಯ ಉದ್ಘಾಟಿಸಿದರು   

ಗೋಣಿಕೊಪ್ಪಲು: ಪೂಜಾಕುಣಿತ, ಗೆಜ್ಜೆಕುಣಿತ, ಪಟಕುಣಿತ, ಡೊಳ್ಳುಕುಣಿತ, ಗಾರುಡಿಬೊಂಬೆ, ನಗಾರಿ, ಯರವರ ಕುಣಿತ, ಲಂಬಾಣಿ ನೃತ್ಯ, ಸೋಮನಕುಣಿತ, ಕಂಸಾಳೆ, ಅಮ್ಮತ್ತಿಯ ಕೊಡವ ವಾದ್ಯ, ಹರಿಕಥೆ- ಹೀಗೆ ಹತ್ತು ಹಲವು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

ಇವು ಕಾನೂರಿನ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಹೊತ್ತು ಮುಳುಗುವವರೆಗೂ ನಡೆದ ಮಹಿಳಾ ಸಾಂಸ್ಕೃತಿಕ ಉತ್ಸವದಲ್ಲಿ ಕಂಡು ಬಂದ ಝಲಕಗಳು.

ಸುತ್ತಲೂ ಹಸಿರುಹೊದ್ದ ಪರಿಸರದೊಳಗೆ ಕಾನೂರು- ಕೋತೂರು ಮಹಿಳಾ ಮಂಡಲ, ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮಹಿಳಾ ಉತ್ಸವ ಗಿರಿಜನ ವಿಶೇಷ ಘಟಕ ಸಾಂಸ್ಕೃತಿಕ ಉತ್ಸವದಲ್ಲಿ ಒಂದು ಕಲೆಗಿಂತ ಮತ್ತೊಂದು ಕಲೆ ಮಿಗಿಲಾಗಿ ಮೂಡಿಬಂದವು.

ADVERTISEMENT

ಚಿಕ್ಕಮಗಳೂರಿನ ಪೂಜಾ ಕುಣಿತದ ತರುಣಿಯರು ಮೈಯಲ್ಲಿ ಎಲುಬೇ ಇಲ್ಲವೇನೊ ಎಂಬಂತೆ ನಲಿದು ನರ್ತಿಸಿ ಮೆರೆದಿದ್ದ ಪ್ರೇಕ್ಷಕ ಸಮೂಹಕ್ಕೆ ಮುದ ನೀಡಿದರು.

ಭಾರವಾದ ಪಟಹೊತ್ತ ತಂಡದ ನಾಯಕಿ ಸವಿತಾ ತಲೆಯ ಮೇಲೆ ಪಟ ಕೂರಿಸಿಕೊಂಡು ಮಲಗಿ ಕಣ್ಣಿನ ರೆಪ್ಪೆಯಲ್ಲಿ ನೋಟು ಮತ್ತು ಗುಂಡುಪಿನ್‌ನ್ನು ಎತ್ತುವ ದೃಶ್ಯ ರೋಮಾಂಚನ ಮೂಡಿಸಿತು. ಸಾಗರದ ಡೊಳ್ಳುಕುಣಿತ ಕಲಾವಿದರು ವಿಶಾಲವಾದ ವೇದಿಕೆಯಲ್ಲಿ ಡೊಳ್ಳಿನೊಂದಿಗೆ ಮನಃಪೂರ್ವಕವಾಗಿ ಪ್ರದರ್ಶನ ತೋರುತ್ತಾ ಕುಣಿದು ಕುಪ್ಪಳಿಸಿದರು.

ಮಹಿಳೆಯರೇ ಇದ್ದ ತಂಡದಲ್ಲಿ ತಾಳ, ವೇಷಭೂಷಣ ಎಲ್ಲವೂ ಅಪ್ಯಾಯಮಾನವಾಗಿದ್ದವು. ಇವುಗಳೆಲ್ಲದರ ಮಧ್ಯೆ ವಿಶೇಷವಾಗಿ ಪ್ರೇಕ್ಷಕರ ಗಮನಸೆಳೆದದ್ದು ಬೆಕ್ಕೆಸೊಡ್ಲೂರಿನ ಮಂದತವ್ವ ಗೆಜ್ಜೆ ತಂಡದ ಕೊಡವ ನೃತ್ಯ. 30 ನಿಮಿಷಗಳ ಕಾಲ ಮೂಡಿಬಂದ ಈ ನೃತ್ಯ ನೆರೆದಿದ್ದ ಪ್ರೇಕ್ಷಕರಿಗೆ ಅಕ್ಷರಶಃ ಮುದನೀಡಿತು. ಕೊಡವ ಜನಾಂಗವದವರೇ ಹೆಚ್ಚು ಸೇರಿದ್ದ ವೇದಿಕೆಯಲ್ಲಿ ವಿನೂತನವಾಗಿ ಮೂಡಿಬಂದ ತಮ್ಮ ಸಂಸ್ಕೃತಿಯನ್ನು ತಮ್ಮದೇ ಭಾಷೆಯಲ್ಲಿ ಬಿಂಬಿಸಿದ ನೃತ್ಯವನ್ನು ನೋಡಿ ಮನಸಾರೆ ಆನಂದಿಸಿದರು. ನೃತ್ಯದಲ್ಲಿದ್ದ ಕೆಲವು ಮಹಿಳೆಯರು ಪುರುಷರ ಕುಪ್ಪೆಚಾಲೆ, ಮಂಡೆತುಣಿ ಧರಿಸಿ ಸೊಗಸಾಗಿ ನರ್ತಿಸುತ್ತಾ ನೃತ್ಯಕ್ಕೆ ಹೊಸ ಮೆರುಗು ಮೂಡಿಸಿದರು.

ನಾಗರಹೊಳೆ ಗದ್ದೆಹಾಡಿ ನಾಣಿಚಿಯ ರಮೇಶ್ ಅವರ ತಂಡದ ಗಿರಿಜನ ನೃತ್ಯ ಸ್ಥಳೀಯ ಬುಡಕಟ್ಟು ಸಂಸ್ಕೃತಿಯನ್ನು ರಂಜಿನೀಯವಾಗಿ ತೆರೆದಿಟ್ಟಿತು. ಮೈಸೂರಿನ ಯುವ ಕಲಾವಿದೆ ಸಿಂಚನಾ ಅವರ ಹರಿಕಥೆ ತಲೆದೂಗಿಸಿತು. ಕಥೆಯ ಪ್ರವಚನದ ಮಧ್ಯದಲ್ಲಿ ಹಾಡುತ್ತಿದ್ದ ಹಾಡುಗಳು ಸುಶ್ರಾವ್ಯವಾಗಿದ್ದವು. ಮಧುರ ಕಂಠದ ಈ ಗಾಯಕಿ ಕಥೆಗಿಂತ ಹೆಚ್ಚಾಗಿ ಗಾಯನದ ಮೂಲಕ ಗಮನಸೆಳೆದರು.

ಹುದಿಕೇರಿಯ ಪಂಚಮ್ ತ್ಯಾಗರಾಜ್ ಅವರ ಕೊಡವ ಗೀತೆಗಳು ಮುದನೀಡಿದವು. ಮೈಸೂರು ಅರಮನೆ ಕಲಾವಿದರ ಸ್ಯಾಕ್ಸೋಫೋನ್ ವಾದನ, ಹಿರಿಯ ಕಲಾವಿದರಾದ ನಾಗೇಂದ್ರ, ತ್ಯಾಗರಾಜ್ ಅವರ ಹಳೆಯ ಚಿತ್ರಗೀತೆಗಳ ಗಾಯನ ಮತ್ತಷ್ಟು ಕೇಳಬೇಕು ಎನ್ನಿಸಿತು. ದಿನವಿಡೀ ಬಿಡುವಿಲ್ಲದಂತೆ ಮೂಡಿಬಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಶ್ಚಿಮದಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಮೈಸೂರಿನ ಪುಟ್ಟ ಬಾಲಕಿಯರು ನೀಡಿದ ‘ಹೋಗೋಣ ಬಾಬಾ ಜಾತುರೆಗೆ...’ ಎಂಬ ಮನಮೋಹಕ ಜಾನಪದ ನೃತ್ಯದ ಮೂಲಕ ತೆರೆಕಂಡಿತು.

ಉದ್ಘಾಟನೆ: ಊರಿನ ಮುಖ್ಯ ರಸ್ತೆಯಲ್ಲಿ ನಡೆದ ಕಲಾ ಜಾಥಾವನ್ನು ಕಾನೂರು- ಕೋತೂರು ಮಹಿಳಾ ಮಂಡಲದ ಅಧ್ಯಕ್ಷೆ ಮಾಯಮ್ಮ ಬೋಪಯ್ಯ ಉದ್ಘಾಟಿಸಿದರು. ಹಿರಿಯರಾದ ಗೌರಿನಂಜಪ್ಪ, ನಿರ್ಮಲಾ ಬೋಪಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಚಕ್ಕೇರ ದರ್ಶನ, ಸಾಹಿತಿ ಡಾ.ಜೆ.ಸೋಮಣ್ಣ ಹಾಜರಿದ್ದರು.

ಸಂಸ್ಕೃತಿ ಇಲಾಖೆಯ ಮಂಜುನಾಥ್, ಶಿಕ್ಷಕಕುಮಾರ್ ಸಂಪಾಜೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.