ADVERTISEMENT

ಶೋಭಾಯಾತ್ರೆ: ಬೆಳಕಿನ ಹೊಳೆಯಲ್ಲಿ ತೇಲಿದ ವೈಭವದ ದಶಮಂಪಟಗಳು

ಜನಸಾಗರದ ನಡುವೆ ವಿಜೃಂಭಣೆಯ ಶೋಭಾಯಾತ್ರೆ

ಕೆ.ಎಸ್.ಗಿರೀಶ್
Published 6 ಅಕ್ಟೋಬರ್ 2022, 19:30 IST
Last Updated 6 ಅಕ್ಟೋಬರ್ 2022, 19:30 IST
ಮಡಿಕೇರಿಯಲ್ಲಿ ಬುಧವಾರ ರಾತ್ರಿ ನಡೆದ ದಶಮಂಟಪಗಳ ಶೋಭಾಯಾತ್ರೆಯನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದರು
ಮಡಿಕೇರಿಯಲ್ಲಿ ಬುಧವಾರ ರಾತ್ರಿ ನಡೆದ ದಶಮಂಟಪಗಳ ಶೋಭಾಯಾತ್ರೆಯನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದರು   

ಮಡಿಕೇರಿ: ‘ಮಂಜಿನ ನಗರಿ’ಯ ‘ಬೆಳಕಿನ ದಸರೆ’ಯು ಅತ್ಯಂತ ವೈಭವೋಪೇತವಾಗಿ ಬುಧವಾರ ನಗರದಲ್ಲಿ ನಡೆಯಿತು. ಬೆಳಕಿನ ಹೊಳೆಯಲ್ಲಿ ಮಂಟಪಗಳು ತೇಲಿದಂತಹ ಅನುಭೂತಿಯನ್ನು ಲಕ್ಷಾಂತರ ಪ್ರೇಕ್ಷಕರು ಪಡೆದುಕೊಂಡರು. ಜನಸಾಗರದ ನಡುವೆ ಮಂಟಪಗಳು ವಿಜೃಂಭಣೆಯ ಪ್ರದರ್ಶನ ತೋರಿ, ಜನಸಮುದಾಯವನ್ನು ವಿಸ್ಮಿತಗೊಳಿಸಿದವು.

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಸಿಂಗಾರಗೊಂಡಿದ್ದ ಮಂಟಪಗಳು ನೋಡುಗರ ಹೃಣ್ಮನ ಸೆಳೆಯುವಲ್ಲಿ ಸಫಲವಾದವು. ಪೇಟೆ ಶ್ರೀರಾಮಮಂದಿರದ ‘ಶಿವದರ್ಶನ’ ಕಥಾಹಂದರವುಳ್ಳ ಮಂಟಪ ಮುಂದಡಿ ಇಡುವ ಮೂಲಕ ವೈಭವ ಶೋಭಾಯಾತ್ರೆಗೆ ಚಾಲನೆ ಸಿಕ್ಕಿತು.

ಬೆಳಿಗ್ಗೆಯಿಂದ ಬಿಡುವಿರದ ರೀತಿಯಲ್ಲಿ ದುಡಿದ ಕಾರ್ಮಿಕರು ಮಂಟಪದ ಶೋಭಾಯಾತ್ರೆ ಆರಂಭವಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. ಮಂಟಪಗಳಲ್ಲಿನ ಆಕೃತಿಗಳ ಚಲನವಲನಗಳನ್ನು ಕಂಡ ನೋಡುಗರು ಚಕಿತಪಟ್ಟರು.

ADVERTISEMENT

ತಾಂತ್ರಿಕವಾಗಿ ಚಲನವಲನಗಳನ್ನು ಆಕೃತಿಗಳಿಗೆ ನೀಡಿ, ಅಬ್ಬರದ ಧ್ವನಿ, ಕಣ್ಣು ಕೋರೈಸುವ ಬೆಳಕು ನೀಡಿ, ಕೃತಕ ಮೋಡಗಳು ತೇಲುವಂತೆ ಮಾಡಿ, ರಕ್ಕಸರ ಬಾಯಿಂದ ಬೆಂಕಿ ಉಗುಳುವಂತೆ ಮಾಡಿದ ಭವ್ಯ ಪ್ರದರ್ಶನವು ಗಂಧರ್ವ ಲೋಕವನ್ನೇ ಧರೆಗಿಳಿಸಿದ ಅನುಭವ ನೀಡಿತು.

ಪೊಲೀಸರಿಂದ ಎಲ್ಲೆಡೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ‘ಸಹಾಯ ಕೇಂದ್ರ’ಗಳನ್ನು ಪೊಲೀಸರು ಅಲ್ಲಲ್ಲಿ ತೆರೆದಿದ್ದು, ಜನಜಂಗುಳಿಯ ಮಧ್ಯೆ ಕಿಡಿಗೇಡಿಗಳ ಕುಕೃತ್ಯ ತಡೆಯಲು ಹದ್ದಿನ ಕಣ್ಣು ನೆಟ್ಟಿದ್ದರು. ಮುಂಜಾಗ್ರತಾ ಕ್ರಮವಾಗಿ ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯದ ವ್ಯಾಪಾರವನ್ನು ನಿಷೇಧಿಸಲಾಗಿತ್ತು.

ರಾಜಾಸೀಟ್‌ ಸಮೀಪ, ಚೌಕಿ, ಕೊಹಿನೂರ್ ಜಂಕ್ಷನ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕೋಟೆ ಮುಂಭಾಗ ಅಪಾರ ಸಂಖ್ಯೆಯ ಜನಸ್ತೋಮ ನೆರೆದಿತ್ತು. ಎಲ್ಲೆಡೆ ವ್ಯಾಪಾರ ವಹಿವಾಟು ಜೋರಾಗಿ ನಡೆದಿತ್ತು.

ಸಂಚಾರ ದಟ್ಟಣೆ ತಡೆಯಲು ನಗರದೊಳಗೆ ಎಲ್ಲ ಬಗೆಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ರಸ್ತೆಗಳಲ್ಲಿ ಜನಪ್ರವಾಹವೇ ಹರಿದು ಬಂದಿತ್ತು. ಇಡೀ ನಗರ ರಾತ್ರಿ ಇಡೀ ವಿರಮಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.