ಮಡಿಕೇರಿ: ಸಿಡಿಲಿನ ಕುರಿತು ಮುನ್ಸೂಚನೆ ನೀಡಲೆಂದೇ ‘ಸಿಡಿಲು’, ‘ಧಾಮಿನಿ’ ಹಾಗೂ ‘ಸಚೇತ್’ ಆ್ಯಪ್‌ಗಳು ಕೆಲವು ವರ್ಷಗಳಿಂದ ಇದ್ದರೂ ಸಿಡಿಲಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
‘ಬಹುತೇಕ ಕೈಯಲ್ಲಿ ಸ್ಮಾರ್ಟ್‌ಫೋನ್‌ಗಳಿದ್ದರೂ ಆ್ಯಪ್‌ಗಳ ಕುರಿತು ಅರಿವು ಮತ್ತು ಬಳಕೆಯ ಕೊರತೆಯೂ ಈ ಪರಿಸ್ಥಿತಿಗೆ ಕಾರಣ’ ಎನ್ನುತ್ತಾರೆ ವಿಜ್ಞಾನಿಗಳು.
ರಾಜ್ಯದಲ್ಲಿ ಮೇ ಮಧ್ಯಭಾಗದವರೆಗೆ, ಮುಂಗಾರು ಪೂರ್ವ ಅವಧಿಯಲ್ಲೇ ಸಿಡಿಲು ಬಡಿದು 36 ಮಂದಿ ಮೃತಪಟ್ಟಿದ್ದಾರೆ. ‘ಮುಂಬರುವ ದಿನಗಳಲ್ಲಿ ಸಿಡಿಲುಗಳಿಂದ ಕೂಡಿದ ಮಳೆ ರಾಜ್ಯದಲ್ಲಿ ಸುರಿಯುವ ಸಂಭವವಿದೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಿಡಿಲಿನಿಂದ ಉಂಟಾಗುವ ಸಾವುಗಳನ್ನು ತಪ್ಪಿಸಲೆಂದೇ, ಮುನ್ಸೂಚನೆ ನೀಡಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ‘ಸಿಡಿಲು’ ಆ್ಯಪ್ ರೂಪಿಸಿದ್ದರೆ, ಕೇಂದ್ರ ಸರ್ಕಾರದ ಭೂವಿಜ್ಞಾನ ಇಲಾಖೆ ‘ಧಾಮಿನಿ’ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ‘ಸಚೇತ್’ ಆ್ಯಪ್ ರೂಪಿಸಿದೆ. ಈ ಎಲ್ಲ ಆ್ಯಪ್‌ಗಳು ಸಿಡಿಲುಗಳು ಬರುವ ಮುನ್ನ ಮುನ್ಸೂಚನೆ ನೀಡುತ್ತಿವೆ.
‘ಸಿಡಿಲು’ ಆ್ಯಪ್ ವಿಶೇಷವಾಗಿ ಪೂರ್ವ ಮುಂಗಾರಿನಲ್ಲಿ ಅಲರ್ಟ್ ನೋಟಿಫಿಕೇಶನ್ ಕಳುಹಿಸುತ್ತದೆ. 1 ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಸಂಭವಿಸಿದರೆ ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಿ, ಮರದ ಕೆಳಗೆ ನಿಲ್ಲಬೇಡಿ ಎಂಬ ಸಲಹೆಗಳನ್ನು ರವಾನಿಸುತ್ತದೆ. 5ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಸಂಭವಿಸುತ್ತಿದ್ದರೂ ಆ್ಯಪ್‌ನಲ್ಲಿ ಮುನ್ಸೂಚನೆ ಸಿಗುತ್ತದೆ.
ಅದರೊಂದಿಗೆ, ಮೋಡಗಳ ಚಲನವಲನ, ಮಳೆಯಾಗುವಿಕೆಯ ಮುನ್ಸೂಚನೆಯನ್ನೂ ಆ್ಯಪ್‌ನಲ್ಲಿ ನೋಡಬಹುದು. ಕೆಂಪು ಬಣ್ಣವಿದ್ದರೆ ಅತಿ ಭಾರಿ ಮಳೆ, ಹಳದಿ ಇದ್ದರೆ ಭಾರಿ ಮಳೆ, ನೀಲಿ ಇದ್ದರೆ ಸಾಧಾರಣ, ಹಸಿರು ಇದ್ದರೆ ಹಗುರ ಮಳೆಯನ್ನು ಸೂಚಿಸುತ್ತದೆ. ಕೇಂದ್ರದಲ್ಲಿ ಮೊಬೈಲ್ ಫೋನ್ ಸಂಖ್ಯೆ ನೋಂದಾಯಿಸಿದರೆ, ಎಸ್‌ಎಂಎಸ್ ರೂಪದಲ್ಲಿ ಸಿಡಿಲಿನ ಮುನ್ಸೂಚನೆಗಳು ಲಭಿಸುತ್ತವೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಹೊನ್ನಾಂಬ, ‘ಹೆಚ್ಚು ಸಾವುಗಳಾಗಿರುವ 50 ತಾಲ್ಲೂಕುಗಳಲ್ಲಿ ಗ್ರಾಮ, ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ, ಕೃಷಿ, ಕಂದಾಯ ಮತ್ತು ಪಶುಸಂಗೋಪನೆ ಅಧಿಕಾರಿಗಳಿಗೆ ಜಾಗೃತಿ ಕಾರ್ಯಾಗಾರ ನಡೆಸಲಾಗಿದೆ’ ಎಂದರು.
‘ಸಿಡಿಲುಗಳಿಂದ ಸಂಭವಿಸುವ ಸಾವಿನ ಪ್ರಮಾಣ ವಿಶ್ವದಲ್ಲಿ ಶೇ 14ರಷ್ಟು ಹಾಗೂ ಭಾರತದಲ್ಲಿ ಶೇ 6ರಿಂದ 7ರಷ್ಟು ಹೆಚ್ಚುತ್ತಿದೆ’ ಎಂದು ವಿಶ್ವ ಹವಾಮಾನ ಸಂಸ್ಥೆಯ ವರದಿಯೊಂದು ತಿಳಿಸಿದೆ. ‘ಭಾರತದಲ್ಲಿ ಪ್ರತಿ ವರ್ಷ ಸುಮಾರು 2 ಸಾವಿರ ಮಂದಿ ಮೃತಪಡುತ್ತಿದ್ದಾರೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.