ಮಡಿಕೇರಿ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಕರಡಿ ಕಲ್ಲು ಅತ್ತೂರು ಕೊಲ್ಲಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಹಾಗೂ ಸಮುದಾಯ ಹಕ್ಕುಗಳಿಗಾಗಿ ಮೇ 5ರಿಂದ ಪ್ರತಿಭಟನೆ ನಡೆಸುತ್ತಿರುವ ಜೇನುಕುರುಬ ಸಮುದಾಯಕ್ಕೆ ಸೇರಿದ 52 ಕುಟುಂಬಗಳಿಗೆ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ನಾಗರಹೊಳೆ ಸಮೀಪದ ಬೊಮ್ಮಾಡು ಸಂಪಿಗೆ ಕೊಲ್ಲಿ ಹಾಡಿಯಲ್ಲಿ ನಡೆದ ಆದಿವಾಸಿ ಮುಖಂಡರ ಸಭೆ ಒತ್ತಾಯಿಸಿತು.
ಈ ಸಂಬಂಧ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶೀಘ್ರವೇ ಪ್ರತಿಭಟನೆ ನಡೆಸಲೂ ಸಭೆ ನಿರ್ಧರಿಸಿತು ಎಂದು ನಾಗರಹೊಳೆ ಆದಿವಾಸಿ ಜಮ್ಮಾಪಾಳೆ ಹಕ್ಕು ಸ್ಥಾಪನಾ ಸಮಿತಿ ಕಾರ್ಯದರ್ಶಿ ಶಿವು ತಿಳಿಸಿದರು.
ಅರ್ಧಕ್ಕೆ ನಿಲ್ಲಿಸಿರುವ ಜಂಟಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲ, ಅರಣ್ಯ ಹಕ್ಕು ಕಾಯ್ದೆ ಅನ್ವಯ ಹಕ್ಕು ಮಾನ್ಯ ಮಾಡಲು ಸೂಚಿಸಿರುವ ಪ್ರಕ್ರಿಯೆಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದೂ ಮುಖಂಡರು ಒತ್ತಾಯಿಸಿದರು.
ನೈಜ ದುರ್ಬಲ ಬುಡಕಟ್ಟುಗಳು ಹಾಗೂ ಅರಣ್ಯ ಆಧಾರಿತ ಆದಿವಾಸಿ ಸಮುದಾಯ ಸಂಘಟನೆಗಳ ಸಮನ್ವಯ, ನಾಗರಹೊಳೆ ಅದಿವಾಸಿ ಜಮ್ಮಾ ಪಾಳೆ ಹಕ್ಕು ಸ್ಥಾಪನಾ ಸಮಿತಿ, ರಾಜ್ಯ ಮೂಲ ಆದಿವಾಸಿ ವೇದಿಕೆ ಕರ್ನಾಟಕ, ಬುಡಕಟ್ಟು ಕೃಷಿಕರ ಸಂಘ, ರಾಜ್ಯ ಜೇನು ಕುರುಬ ಅಭಿವೃದ್ಧಿ ಸಂಘ, ರಾಜ್ಯ ಬೆಟ್ಟ ಕುರುಬ ಪಾರಂಪರಿಕ ಸೇವಾ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಶಿವು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.