ADVERTISEMENT

ಶನಿವಾರಸಂತೆ: ರಸ್ತೆಯ ಮೇಲಿನ ತ್ಯಾಜ್ಯ ತೆಗೆಯಲು ಅಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:47 IST
Last Updated 1 ಏಪ್ರಿಲ್ 2023, 5:47 IST
ಶನಿವಾರಸಂತೆ ಪಟ್ಟಣದ ತ್ಯಾಗರಾಜ್ ಕಾಲೋನಿಯಲ್ಲಿ ಚರಂಡಿ ಒಳಗೆ ಇದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯು ಮಿನಿ ಜೆಸಿಬಿ ಮೂಲಕ ತೆಗೆದು ರಸ್ತೆಯ ಮೇಲೆ ಹಾಕಿರುವುದು
ಶನಿವಾರಸಂತೆ ಪಟ್ಟಣದ ತ್ಯಾಗರಾಜ್ ಕಾಲೋನಿಯಲ್ಲಿ ಚರಂಡಿ ಒಳಗೆ ಇದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯು ಮಿನಿ ಜೆಸಿಬಿ ಮೂಲಕ ತೆಗೆದು ರಸ್ತೆಯ ಮೇಲೆ ಹಾಕಿರುವುದು   

ಶನಿವಾರಸಂತೆ: ಇಲ್ಲಿನ ತ್ಯಾಗರಾಜ್ ಕಾಲೋನಿಯ ಯಶಸ್ವಿ ಚಿತ್ರಮಂದಿರದ ಎದುರು ಚರಂಡಿ ಒಳಗೆ ಇದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯು ಮಿನಿ ಜೆಸಿಬಿ ಮೂಲಕ ತೆಗೆದು ರಸ್ತೆಯ ಮೇಲೆ ಹಾಕಿ ಒಂದು ವಾರ ಕಳೆದಿದೆ. ಕೂಡಲೇ ಇದನ್ನು ತೆಗೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶನಿವಾರಸಂತೆಯ ಕೇಂದ್ರ ಭಾಗ ಎಂದೇ ಹೆಸರಾಗಿರುವ ತ್ಯಾಗರಾಜ ಕಾಲೋನಿಯ ಕಾವೇರಿ ರಸ್ತೆಯ ಚರಂಡಿಯಲ್ಲಿ ತ್ಯಾಜ್ಯ ತುಂಬಿರುವುದನ್ನು ಸ್ಥಳೀಯರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದರು. ಅದರಂತೆ ತ್ಯಾಜ್ಯವನ್ನು ಚರಂಡಿಯಿಂದ ತೆಗೆದು ಮೇಲಕ್ಕೆ ಸುರಿದು ಒಂದು ವಾರ ಕಳೆದಿದೆ. ಅಲ್ಲಿಂದ ಅದನ್ನು ತೆಗೆಸುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿಲ್ಲ.

ತ್ಯಾಜ್ಯದಿಂದ ದುರ್ವಾಸನೆ ಹೊರಹೊಮ್ಮುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯರಲ್ಲಿ ರೋಗ ಹರಡುವ ಆಂತಕ ಸೃಷ್ಟಿಯಾಗಿದೆ. ಇನ್ನು ಚಿತ್ರಮಂದಿರದ ದ್ವಾರದ ಎದುರು ಇರುವ ಮೋರಿಗೆ ತಡೆಗೋಡೆ ಅವಶ್ಯಕತೆ ಇದೆ. ಇಲ್ಲಿಗೆ ವಾಹನ ತಿರುಗಿಸುವ ವೇಳೆ ಈ ಚರಂಡಿಗೆ ಬೀಳುವ ಸಾಧ್ಯತೆ ಇದೆ. ಘನ ವಾಹನಗಳು ಸಂಚರಿಸಲು ಹರಸಾಹಸಪಡುವಂತಾಗಿದೆ. ಪಾದಚಾರಿಗಳು ಭಯದಿಂದ ಈ ಸ್ಥಳದಲ್ಲಿ ನಡೆದಾಡುತ್ತಿದ್ದಾರೆ.

ADVERTISEMENT

ಸಮೀಪದಲ್ಲಿ ಇರುವ ಖಾಸಗಿ ಶಾಲೆಗೆ ಪ್ರತಿ ನಿತ್ಯ ವಿದ್ಯಾರ್ಥಿಗಳು ಹೋಗುವಾಗ ಎದುರಿನಿಂದ ಬರುವ ವಾಹನಕ್ಕೆ ಸ್ಥಳಾವಕಾಶ ನೀಡಿ ಬದಿಗೆ ಹೋಗಲು ಆಗುವುದಿಲ್ಲ. ಚರಂಡಿಯು ಸುಮಾರು 6 ಅಡಿ ಆಳಕ್ಕೆ ಕುಸಿದಿದೆ. ಜೊತೆಯಲ್ಲಿ ಕೊಳವೆ ಬಾವಿ ಕೆಟ್ಟು ನಿಂತಿದೆ. ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ರಸ್ತೆಯ ಮೇಲೆ ಸ್ವಚ್ಚತೆ ಮಾಡಿ ಮೇಲ್ಬಾಗ ತಡೆಗೊಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.