ಮಡಿಕೇರಿ: ‘ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ (ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು ಹಾಗೂ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಇಲ್ಲಿನ ಮಾದಾಪುರದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಶನಿವಾರ ನಡೆದ 8ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ನಾಚಪ್ಪ ವಿವರಿಸಿದರು.
ಇದೇ ವೇಳೆ ಅವರು, ‘ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಭೂಕುಸಿತಗಳು ಸಂಭವಿಸಿದ ಬಳಿಕವೂ ಇಲ್ಲಿ ದೊಡ್ಡ ದೊಡ್ಡ ರೆಸಾರ್ಟ್‌ಗಳು ನಿರ್ಮಾಣವಾಗುತ್ತಿವೆ. ಒಂದು ವೇಳೆ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ’ ಎಂದೂ ಆತಂಕ ವ್ಯಕ್ತಪಡಿಸಿದರು.
ಆದಿಮಸಂಜಾತ ಕೊಡವರಿಗೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯೊಂದಿಗೆ, ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯ ಹಕ್ಕು ನೀಡುವುದೊಂದೇ ಇದನ್ನು ತಡೆಯುವ ಏಕೈಕ ಮಾರ್ಗ ಎಂದು ಅವರು ಪ್ರತಿಪಾದಿಸಿದರು.
ಸುರಿಯುತ್ತಿದ್ದ ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮಾನವ ಸರಪಳಿಯಲ್ಲಿ ಭಾಗವಹಿಸಿದರು. ಮುಂದಿನ 9ನೇ ಮಾನವ ಸರಪಳಿಯು ಆಗಸ್ಟ್ 10ರಂದು ಬೆಳಿಗ್ಗೆ 10.30ಕ್ಕೆ ಸುಂಟಿಕೊಪ್ಪದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಿಸಿದರು.
ನಾಪಂಡ ರಮ್ಯ ಚಂಗಪ್ಪ, ಪಾಸುರ ರಜಿನಿ, ನಾಪಂಡ ಶೈಲಾ, ಮೇದೂರ ಪ್ರತೀಕ, ನಾಗಂಡ ರೇಣು, ಕುಟ್ಟಂಡ ಗೊಂಬೆ, ತಂಬುಕುತ್ತೀರ ಜಾಜಿ, ತಂಬುಕುತ್ತೀರ ರೇಖಾ, ಉದ್ದಿನಾಡಂಡ ಪೊನ್ನಮ್ಮ, ಮಂಡೀರ ನೀಲಮ್ಮ, ಬಾಳೆಯಡ ಪೊನ್ನಮ್ಮ, ಸರ್ವಶ್ರೀ ಮೇದೂರ ಕಂಠಿ, ಬಾಚಿನಾಡಂಡ ಗಿರಿ, ಹಂಚೇಟಿರ ಮನು, ಮುದ್ದಂಡ ಮಧು, ಮೇದೂರ ದೇವಯ್ಯ, ನಾಪಂಡ ಅರುಣಾ, ಕುಟ್ಟಂಡ ನಂದಾ, ನಾಪಂಡ ಶಿವಕುಮಾರ್, ಅಡ್ಡಂಡ ಚಿಯಣ್ಣ, ಕೊಚ್ಚೆರ ಪಳಂಗಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.