ADVERTISEMENT

ಕುಶಾಲನಗರ: ವಿಶೇಷ ಪ್ಯಾಕೇಜ್‌ ಘೋಷಣೆಗೆ ಆಗ್ರಹ

ಕುಶಾಲನಗರ: ಲಾಕ್‌ಡೌನ್‌ನಿಂದ ಕಂಪ್ಯೂಟರ್ ತರಬೇತಿ ಕೇಂದ್ರಗಳು ಬಂದ್‌

ರಘು ಹೆಬ್ಬಾಲೆ
Published 29 ಮೇ 2021, 4:13 IST
Last Updated 29 ಮೇ 2021, 4:13 IST
ಕುಶಾಲನಗರದಲ್ಲಿ ಲಾಕ್‌ಡೌನ್‌ನಿಂದ ಮುಚ್ಚಿರುವ ಕಂಪ್ಯೂಟರ್ ತರಬೇತಿ ಕೇಂದ್ರ
ಕುಶಾಲನಗರದಲ್ಲಿ ಲಾಕ್‌ಡೌನ್‌ನಿಂದ ಮುಚ್ಚಿರುವ ಕಂಪ್ಯೂಟರ್ ತರಬೇತಿ ಕೇಂದ್ರ   

ಕುಶಾಲನಗರ: ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಂಪ್ಯೂಟರ್ ತರಬೇತಿ ಕೇಂದ್ರಗಳು ಬಂದ್ ಆಗಿದ್ದು, ಇದರಿಂದ ತರಬೇತಿ ಕೇಂದ್ರ ನಡೆಸುವ ಮಾಲೀಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಕೊರೊನಾ ಎರಡನೇ ಅಲೆ ತಡೆಗಟ್ಟಲು ಸರ್ಕಾರ ಲಾಕ್‌ಡೌನ್ ಮುಂದುವರಿಸಿದ್ದು, ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿದೆ. ಈ ಅವಧಿಯಲ್ಲೂ ಆನ್‌ಲೈನ್ ಮೂಲಕ‌ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆ ಮುಂದುವರೆಸಲು ಅವಕಾಶ ನೀಡಲಾ ಗಿದೆ. ಆದರೆ, ಕಂಪ್ಯೂಟರ್ ಕಲಿಕೆಗೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.

ನಗರದ ಕಂಪ್ಯೂಟರ್‌ ತರಬೇತಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ಬದುಕು ಅತಂತ್ರವಾಗಿದೆ. ಕೇಂದ್ರಗಳ ಕಟ್ಟಡದ ಬಾಡಿಗೆ, ವಿದ್ಯುತ್ ಬಿಲ್‌, ದೂರವಾಣಿ ಬಿಲ್‌, ಯುಪಿಎಸ್, ಪ್ರಿಂಟರ್ ಮತ್ತು ಕಂಪ್ಯೂಟರ್‌ಗಳ ನಿರ್ವಹಣಾ ಶುಲ್ಕ, ಬ್ಯಾಂಕ್ ಸಾಲದ ಕಂತು ಇನ್ನೂ ಮುಂತಾದ ಖರ್ಚುಗಳನ್ನು ಭರಿಸಲಾರದೆ ಪರದಾಡುತ್ತಿದ್ದಾರೆ.

ADVERTISEMENT

‘ರಾಜ್ಯದ ಸಾವಿರಾರು ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾಗಬೇಕು’ ಎಂದು ರಾಜ್ಯ ಕಂಪ್ಯೂಟರ್ ತರಬೇತಿ ಕೇಂದ್ರಗಳ ಒಕ್ಕೂಟದ ರಾಜ್ಯ ಸಂಚಾಲಕ ಕೆ.ಪಿ. ಚಂದ್ರಶೇಖರ್ ಒತ್ತಾಯ ಮಾಡಿದ್ದಾರೆ.‌

‘ವಿವಿಧ ಕೋರ್ಸ್‌ಗಳನ್ನು ಕಲಿಯಲು ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಬರುತ್ತಿದ್ದರು. ಇದೀಗ ಇವರ ಕಲಿಕೆಗೆ ಹಿನ್ನಡೆಯಾಗಿದೆ. ಕೇಂದ್ರಗಳ ಶಿಕ್ಷಕರಿಗೆ ವೇತನ ಸೇರಿದಂತೆ ಇನ್ನಿತರೆ ವೆಚ್ಚಗಳಿಂದ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ’ ಎಂದು ಅಪ್ಟೈಕ್ ಕಂಪ್ಯೂಟರ್ ಸೆಂಟರ್‌ನ ವ್ಯವಸ್ಥಾಪಕ ನವೀನ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.