ADVERTISEMENT

ಕೊಡಗು: ಪಂದ್ಯಂಡ ಬೆಳ್ಳಿಯಪ್ಪ ಹೆಸರಿಡಲು ಒತ್ತಾಯ

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್‌, ಕುಲಪತಿಗೆ ಮನವಿ ಸಲ್ಲಿಸಿದ ಅಲ್ಲಾರಂಡ ವಿಠಲ ನಂಜಪ್ಪ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 6:07 IST
Last Updated 29 ಜೂನ್ 2025, 6:07 IST
ಅಲ್ಲಾರಂಡ ವಿಠಲ ನಂಜಪ್ಪ
ಅಲ್ಲಾರಂಡ ವಿಠಲ ನಂಜಪ್ಪ   

ಮಡಿಕೇರಿ: ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್‌ಗೆ ‘ಕೊಡಗಿನ ಗಾಂಧಿ’ ಎಂದೇ ಪ್ರಖ್ಯಾತರಾಗಿದ್ದ ಪಂದ್ಯಂಡ ಬೆಳ್ಳಿಯಪ್ಪ ಅವರ ಹೆಸರಿಡಬೇಕು ಎಂದು ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಒತ್ತಾಯಿಸಿದರು.

ಕಾಲೇಜಿಗೆ ವೀರ ಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರೇ ಇರಬೇಕು. ಕಾಲೇಜಿನ ಕ್ಯಾಂಪಸ್‌ಗೆ ಕಾಲೇಜಿನ ಸ್ಥಾಪನೆಗಾಗಿ ಹೋರಾಡಿದ ಪಂದ್ಯಂಡ ಬೆಳ್ಳಿಯಪ್ಪ ಅವರ ಹೆಸರಿಡಬೇಕು. ಈ ಮೂಲಕ ಅವರನ್ನು ನೆನಪಿಸಿಕೊಳ್ಳಬೇಕಿದೆ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂದ್ಯಂಡ ಬೆಳ್ಳಿಯಪ್ಪ ಅವರು 1948ರಿಂದಲೇ ಕಾಲೇಜಿನ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅವರು ನಡೆಸಿದ ಸತತ ಪರಿಶ್ರಮದಿಂದ 1949ರಲ್ಲಿ ಕಾಲೇಜು ಆರಂಭವಾಯಿತು. ಇದಕ್ಕೆ ಪೂರಕ ಆಧಾರಗಳಿವೆ ಎಂದರು.

ADVERTISEMENT

ಸ್ವಾತಂತ್ರ್ಯ ಬಂದಾಗ ಕೊಡಗು ರಾಜ್ಯವಾಗಿತ್ತು. ಅಂದಿನ ಯುವ ಸಮುದಾಯ ವಿದ್ಯಾಭ್ಯಾಸಕ್ಕಾಗಿ ಹೊರರಾಜ್ಯಗಳನ್ನು ಅವಲಂಬಿಸಬೇಕಿತ್ತು. ಈ ವಿಚಾರವನ್ನು ಅಂದಿನ ಪ್ರಧಾನಮಂತ್ರಿ ಜವಹರಲಾಲ ನೆಹರೂ ಅವರಿಗೆ ದೆಹಲಿಯಲ್ಲಿ ಮನವರಿಕೆ ಮಾಡಿಕೊಟ್ಟವರು ಪಂದ್ಯಂಡ ಬೆಳ್ಳಿಯಪ್ಪ. ಇದು ಮಾತ್ರವಲ್ಲ, ಕೊಡಗಿಗೆ ತನ್ನದೇಯಾದ ಕೊಡುಗೆ ನೀಡಿರುವ ಅವರನ್ನು ಮರೆಯುವುದು ಸರಿಯಲ್ಲ ಎಂದರು.

ಇಂತಹ ಮಹನೀಯ ಸಾಧಕರನ್ನು ನೆನಪು ಮಾಡಿಕೊಳ್ಳುವುದು, ಅವರ ಪರಿಶ್ರಮವನ್ನು ಮುಂದಿನ ಜನಾಂಗಕ್ಕೆ ತಿಳಿಸುವಂತೆ ಮಾಡಲು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್‌ಗೆ ಅವರ ಹೆಸರಿಡಬೇಕು. ಸಾಧ್ಯವಾದರೆ, ಅವರ ಪ್ರತಿಮೆಯೊಂದನ್ನು ನಿರ್ಮಿಸಿ, ಅವರ ಸಾಧನೆಯ ವಿವರಗಳನ್ನು ಹಾಕಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಈ ಕುರಿತು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅವರಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಸಕರಾತ್ಮಕ ಸ್ಪಂದನೆಯೂ ಸಿಕ್ಕಿದೆ ಎಂದರು.

‘ಕೊಡಗಿನ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿದ ಕೊಡುಗೆಯನ್ನು ನಾವು ಮರೆಯಬಾರದು. ಕಾಲೇಜಿನ ಸ್ಥಾಪನೆಯ ಹಿಂದಿನ ಅವರ ಶ್ರಮವನ್ನು ಹಿಂದಿನ ವಿವಿಧ ಪತ್ರಿಕೆಗಳು ಹಾಗೂ ಪುಸ್ತಕಗಳಲ್ಲಿ ದಾಖಲಾಗಿವೆ. ಹಾಗಾಗಿ, ಕ್ಯಾಂಪಸ್ಸಿಗೆ ಅವರ ಹೆಸರು ಇಡುವುದು ಸೂಕ್ತ’ ಎಂದು ಪ್ರತಿಪಾದಿಸಿದರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕ್ಯಾಂಪಸ್‌ಗೆ ‘ಕೊಡಗಿನ ಗಾಂಧಿ’ ಎಂದೇ ಪ್ರಖ್ಯಾತರಾಗಿದ್ದ ಪಂದ್ಯಂಡ ಬೆಳ್ಳಿಯಪ್ಪ ಅವರ ಹೆಸರಿಡಬೇಕು ಎಂದು ಅಲ್ಲಾರಂಡ ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಅವರು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಅವರಿಗೆ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.