ಧಗಧಗಿಸುವ ಕೆಂಡವನ್ನು ಭಕ್ತರು ಹಾಯುತ್ತಿರುವುದು (ಸಂಗ್ರಹ ಚಿತ್ರ)
ಗೋಣಿಕೊಪ್ಪಲು: ಬಯಲನ್ನೇ ಆಲಯ ಮಾಡಿಕೊಂಡು ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಿರುವ ಅರುವತ್ತೊಕ್ಕಲು ಕಾಡ್ಲಯ್ಯಪ್ಪ ದೇವರ ವಾರ್ಷಿಕೋತ್ಸವ ಮಾರ್ಚ್ 15 ಮತ್ತು 16ರಂದು ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಇದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ.
ಪೊನ್ನಂಪೇಟೆಯಿಂದ 3 ಕಿ.ಮೀ ದೂರದಲ್ಲಿರುವ ದೇವರಕಾಡು ವನವೇ ಕಾಡ್ಲಯ್ಯಪ್ಪ ದೇವರ ನೆಲೆ. ಪೊನ್ನಂಪೇಟೆಯಿಂದ ಗೋಣಿಕೊಪ್ಪಲಿಗೆ ಬರುವ ಹೆದ್ದಾರಿ ಬದಿಯಲ್ಲಿ ಎಡಕ್ಕೆ ತಿರುಗಿದರೆ ಕಾಡ್ಲಯ್ಯಪ್ಪ ದೇವಸ್ಥಾನಕ್ಕೆ ತೆರಳುವ ಡಾಂಬರು ರಸ್ತೆ ಸಿಗುತ್ತದೆ. ಮುಖ್ಯ ರಸ್ತೆಯಿಂದ ಮತ್ತೆ 3 ಕಿ.ಮೀ ಕಾಫಿ ತೋಟದ ನಡುವಿನ ಡಾಂಬರು ರಸ್ತೆಯಲ್ಲಿ ಸಾಗಿದರೆ ದಟ್ಟ ಕಾಡಿನ ನಡುವೆ ನೆಲೆಸಿರುವ ಅಯ್ಯಪ್ಪ ದೇವರ ಸನ್ನಿಧಿ ಎದುರಾಗಲಿದೆ.
ಕಾಡ್ಲಯ್ಯಪ್ಪ ದೇವರ ವನ 18 ಎಕರೆಯಷ್ಟು ವಿಶಾಲವಾಗಿದೆ. ಈ ಕಾಡಿನಲ್ಲಿ ಮುಗಿಲೆತ್ತರಕ್ಕೆ ಬೆಳೆದಿರುವ ಬಿದಿರು, ದೂಪದ ಮರ, ಹೊನ್ನೆ, ಕರಡಿ, ಮತ್ತಿ, ಬೀಟೆ ಮೊದಲಾದ ದೇಸಿ ತಳಿಗಳ ಮರಗಳು ಬೃಹತ್ತಾಗಿ ಬೆಳೆದು ನಿಂತಿವೆ. ಇಂಥ ದಟ್ಟ ಕಾಡಿನಲ್ಲಿ ಅಯ್ಯಪ್ಪ ದೇವರ ದೇವಸ್ಥಾನವಿದೆ. ಕೊಡಗಿನ ಪ್ರತಿ ಊರುಗಳಲ್ಲಿಯೂ ಇರುವ ದೇವರಕಾಡಿನಲ್ಲಿಯೂ ನೆಲೆ ಊರಿರುವ ದೇವರೇ ಅಯ್ಯಪ್ಪ. ಅದರಂತೆ ಅರುವತ್ತೊಕ್ಕಲಿನ ದೇವರ ಕಾಡಿನಲ್ಲಿಯೂ ಅಯ್ಯಪ್ಪ ದೇವರ ನೆಲೆಯಿದೆ. ಈ ದೇವರಿಗೆ ಮಾತ್ರ ಕಾಡ್ಲಯ್ಯಪ್ಪ ಎಂಬ ವಿಶೇಷವಿದೆ. ಕಾಡಿನಲ್ಲಿ ಇರುವ ಅಯ್ಯಪ್ಪ ದೇವರನ್ನು ಕಾಡಿನ ಅಯ್ಯಪ್ಪ ಎಂದು ಕರೆಯುತ್ತಿದ್ದು, ಅದು ಕ್ರಮೇಣ ಆಡು ಭಾಷೆಯಲ್ಲಿ ಕಾಡ್ಲಯ್ಯಪ್ಪ ಆಗಿರಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಹಿಂದೆ ಇಲ್ಲಿನ ಅಯ್ಯಪ್ಪ ಮರದ ಬುಡವೇ ಆಸರೆ ಆಗಿತ್ತು. ಇದರ ಜತೆಯಲ್ಲಿಯೇ ಮಣ್ಣಿನಿಂದ ಮಾಡಿದ ನಾಯಿ, ಮೊಲ ಮೊದಲಾದ ಮೂರ್ತಿಗಳಿದ್ದವು. ಈಗ ಈ ದೇವರಿಗೆ ಅಂದಾಜು 10 ಅಡಿ ಅಗಲ, 20 ಅಡಿ ಉದ್ದದ ಗ್ರಾನೈಟ್ ಕಲ್ಲುಗಳಿಂದ ಕೂಡಿದ ಸುಂದರ ಗೋಡೆ ನಿರ್ಮಿಸಲಾಗಿದೆ. ಈ ಗೋಡೆಗೆ ಭಾರಿ ಭದತ್ರೆಯ ಕಬ್ಬಿಣದ ಬಾಗಿಲು ನಿರ್ಮಿಸಿ ಅದಕ್ಕೆ ಬೀಗ ಹಾಕಲಾಗುತ್ತದೆ. ಗೋಡೆಯ ಹೆಬ್ಬಾಗಿಲ ಬಳಿ 3 ಅಡಿ ಎತ್ತರದ ದೇವಾಲಯಗಳ ಕಂಬಗಳನ್ನು ನಿಲ್ಲಿಸಲಾಗಿದೆ. ಈ ದೇವಾಲಯದ ವಿಶೇಷವೆಂದರೆ ಇದಕ್ಕೆ ಚಾವಣಿಯೇ ಇಲ್ಲದಿರುವುದು.
ದೇವಾಲಯದ ಸುತ್ತ ತಂತಿ ಬೇಲಿ ನಿರ್ಮಿಸಲಾಗಿದೆ. ಒಳಗಿನ ಆವರಣದಲ್ಲಿ ಕಲ್ಲುಗಳನ್ನು ಹಾಸಿ ಭಕ್ತರ ಸುರಕ್ಷಿತ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಈ ದೇವಸ್ಥಾನದ ಆವರಣದಲ್ಲಿ ಮಹದೇವ, ಗೆರೆಕೆರೆ ಅಯ್ಯಪ್ಪ, ಗುಂಡಿಯತ್ ಅಯ್ಯಪ್ಪ ಮೊದಲಾದ ಸಹೋದರ ದೇವರುಗಳು ಇವೆ. ಈ ಎಲ್ಲ ದೇವರುಗಳಿಗೂ ಬಯಲೇ ಆಲಯ. ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ, ಇದನ್ನು ಪೂಜಿಸುವವರು ಅಮ್ಮಕೊಡವ ಜನಾಂಗಕ್ಕೆ ಸೇರಿದ ಪೂಜಾರಿ.
ಪ್ರಮುಖವಾಗಿ, ಇಲ್ಲಿನ ಕಾಡ್ಯಮಾಡ ಕುಟುಂಬದವರೇ ಇದರ ತಕ್ಕ ಮುಖ್ಯಸ್ಥರಾಗಿರುತ್ತಾರೆ. ಇವರ ಜತೆಗೆ, ಅರುವತ್ತೊಕ್ಕಲು ಗ್ರಾಮದ ಸುತ್ತಮುತ್ತಲಿನ ಕುಟುಂಬಗಳಾದ ಜಮ್ಮಡ, ಕೊಪ್ಪೀರ, ಗುಮ್ಮಟೀರ, ಮದ್ರೀರ, ಅಚ್ಚಿಯಂಡ, ಪಣಿಕ್ಕ ಮೊದಲಾದ 7 ಕುಟುಂಬಸ್ಥರು ಪ್ರಧಾನ ಜವಾಬ್ದಾರಿ ಹೊತ್ತಿರುತ್ತಾರೆ.
ಪ್ರತಿವರ್ಷ ಮಾರ್ಚ್‌ನಲ್ಲಿ ನಡೆಯುವ ವಾರ್ಷಿಕೋತ್ಸವಕ್ಕೆ 15 ದಿನ ಮೊದಲೇ ಊರಿನಲ್ಲಿ ಕಟ್ಟು ಬೀಳಲಿದೆ. ಈ ಬಾರಿ ಮಾರ್ಚ್ 1ರಂದು ಕಟ್ಟು (ನಿಬಂಧನೆ) ಹಾಕಲಾಯಿತು. 15ರಂದು ಕಟ್ಟು ತೆಗೆಯಲಾಗುತ್ತದೆ. ಅಂದು ಕಾಡ್ಯಮಾಡ ಐನ್‌ಮನೆಯಿಂದ ದೇವಸ್ಥಾನಕ್ಕೆ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಭಂಡಾರ ಹೊರಡಲಿದೆ. ಇದನ್ನು ಮದ್ದಲೆ ಮತ್ತು ಕೊಡವ ದುಡಿಪಾಟ್‌ನೊಂದಿಗೆ ಭಕ್ತಿಪೂರ್ವಕವಾಗಿ ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಪೂಜೆ ಪುನಸ್ಕಾರಗಳು ನಡೆಯಲಿದೆ. ಬಳಿಕ ವಿವಿಧ ವೇಷ ತೊಟ್ಟ ಭಕ್ತರು ಮನೆಗಳಿಗೆ ತೆರಳಿ ಮನೆಕಳಿಯಾಟ (ಕುಣಿಯುತ್ತಾ, ಹಾಡುತ್ತಾ) ಸಂಭ್ರಮಿಸುತ್ತಾರೆ. ಮನೆಯ ಬಂದವ ಕಳಿಯಾಟದವರಿಗೆ ಮನೆಯವರು ತಿಂಡಿ ತಿನಿಸುಗಳನ್ನು ನೀಡಿ ಸತ್ಕರಿಸುತ್ತಾರೆ.
ಹೀಗೆ ಇಡೀ ರಾತ್ರಿ ನಡೆದು ಮುಂಜಾನೆ 3 ಅಥವಾ 4 ಗಂಟೆ ವೇಳೆಗೆ ಕಳಿಯಾಟದವರು ಮರಳಿ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಧಗಧಗಿಸುವ ಕೊಂಡವನ್ನು ಹಾಯುವ ಪ್ರಕ್ರಿಯೆ ಶುರುವಾಗುತ್ತದೆ. ಅಲ್ಲಿ ಹರಕೆ ಹೊತ್ತವರೆಲ್ಲ ಕೊಂಡ ಹಾಯುತ್ತಾರೆ. ಕೆಂಪಗೆ ಧಗಧಗಿಸುವ ಕೆಂಡವನ್ನು ತುಳಿಯುತ್ತಾ ಸಾಗುವವರನ್ನು ಕಂಡರೆ ಭಯ ಮತ್ತು ಆತಂಕ ಮೂಡುತ್ತದೆ. ಆದರೂ, ಯಾರಿಗೂ ಏನೂ ಅಪಾಯವಾಗುವುದಿಲ್ಲ. ಕೊಂಡ ಹಾಯುವುದು 16ರಂದು ಬೆಳಿಗ್ಗೆ 11 ಗಂಟೆವರೆಗೂ ನಡೆಯಲಿದೆ.
ಆ ನಂತರ ಕಾವೇರಿ ತೀರ್ಥ, ಕಾಶಿ ತೀರ್ಥ ತಂದು ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಬಳಿಕ ಕಾಡ್ಯಮಾಡ ಐನ್‌ಮನೆಯಲ್ಲಿ ಬಂದ ಭಕ್ತಿರಿಗೆಲ್ಲ ಸಸ್ಯಕಾರದ ಪ್ರಸಾದ ವಿನಿಯೋಗ ನಡೆಯುತ್ತದೆ. ಇದನ್ನು ಕಾಡ್ಯಮಾಡ ಕುಟುಂಬಸ್ಥರೇ ಆಯೋಜಿಸಿರುತ್ತಾರೆ.
ಇಲ್ಲಿ ದೇವರಿಗೆ ಆಭರಣತೊಡಿಸಿ, ಹೂವಿನ ಅಲಂಕಾರ ಮಾಡಿ ಅದನ್ನು ಮೆರೆಸುವವರು ಪಣಿಕ್ಕರು. 16ರಂದು ಸಂಜೆ ಜಮ್ಮಡ ಕುಟುಂಬದ ಅಜ್ಜಪ್ಪ ತೆರೆ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.
ಉತ್ಸವಕ್ಕೆ ತೆರೆ ಬಿದ್ದ ಬಳಿಕ ಪಣಿಕ್ಕರು ನುಡಿಸುವ ಮದ್ದಲೆ ಮೂಲಕ ದೇವರ ಭಂಡಾರವನ್ನು ಮರಳಿ ಕಾಡ್ಯಮಾಡ ಕುಟುಂಬದ ಐನ್‌ಮನೆಗೆ ತಂದು ಇಡಲಾಗುತ್ತದೆ. ಊರಲ್ಲಿ ಹಾಕಿದ್ದ ದೇವಕಟ್ಟಿಗೂ ತೆರೆ ಬೀಳಲಿದೆ.ಕಾಡ್ಯಮಾಡ ಪ್ರೀತ್, ಅಧ್ಯಕ್ಷ, ದೇವಸ್ಥಾನ ಅಭಿವೃದ್ಧಿ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.