ADVERTISEMENT

ಕುಶಾಲನಗರ: ಪುರಸಭೆಯಾದರೂ ಆಗಬೇಕಿರುವುದು ಏನು?

ಕುಶಾಲನಗರ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರದಿಂದ ಅಧಿಕೃತ ಆದೇಶ

ರಘು ಹೆಬ್ಬಾಲೆ
Published 15 ಡಿಸೆಂಬರ್ 2022, 19:30 IST
Last Updated 15 ಡಿಸೆಂಬರ್ 2022, 19:30 IST
ಕುಶಾಲನಗರ ಪಟ್ಟಣ ಪಂಚಾಯಿತಿ
ಕುಶಾಲನಗರ ಪಟ್ಟಣ ಪಂಚಾಯಿತಿ   

ಕುಶಾಲನಗರ: ಇಲ್ಲಿನ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೆ ಬಡ್ತಿ ಪಡೆದಿದೆ. ಸರ್ಕಾರ ದಿಂದ ಅಧಿಕೃತ ಅಧಿಸೂಚನೆಯೂ ಹೊರಬಿದ್ದಿದೆ. ಕೇವಲ ಅಧಿಸೂಚನೆ ಹೊರಡಿಸಿದರೆ ಸಾಲದು, ಅದಕ್ಕೆ ಪೂರಕವಾದ ಮೂಲ ಸೌಕರ್ಯಗಳನ್ನೂ ಕಲ್ಪಿಸಿಕೊಡಬೇಕು ಎಂಬ ಒತ್ತಾಯ ನಾಗರಿಕರಿಂದ ಕೇಳಿಬಂದಿದೆ.

ಮುಖ್ಯವಾಗಿ ಸಿಬ್ಬಂದಿ ಕೊರತೆಯಿಂದ ಪಟ್ಟಣ ಪಂಚಾಯಿತಿ ನಲುಗುತ್ತಿತ್ತು. ಪುರಸಭೆಯಾದ ನಂತರ ಮತ್ತಷ್ಟು ಸಿಬ್ಬಂದಿಯ ಅಗತ್ಯ ಇದೆ. ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ತ್ವರಿತವಾಗಿ ಭರ್ತಿ ಮಾಡಬೇಕಿದೆ.

ಸದ್ಯ ಇರುವುದು ಕೇವಲ 22 ಪೌರಕಾರ್ಮಿಕರು. ಕನಿಷ್ಠ ಎಂದರೂ 50 ಪೌರಕಾರ್ಮಿಕರ ಅಗತ್ಯ ಇದೆ. ಜತೆಗೆ, ಇಬ್ಬರು ಮೇಲ್ವಿಚಾರಕರೂ ಬೇಕಿದ್ದಾರೆ. ಒಬ್ಬರು ಮ್ಯಾನೇಜರ್, ಒಬ್ಬರು ಸಹಾಯಕ ಎಂಜಿನಿಯರ್, ಇಬ್ಬರು ಕಿರಿಯ ಎಂಜಿನಿಯರ್, ಒಬ್ಬರು ಪರಿಸರ ಎಂಜಿನಿಯರ್, ಒಬ್ಬರು ಹಿರಿಯ ಆರೋಗ್ಯ ನಿರೀಕ್ಷಕರು, ಇಬ್ಬರು ಕಿರಿಯ ಆರೋಗ್ಯ ನಿರೀಕ್ಷಕರು, ಇಬ್ಬರು ಕಂದಾಯ ನಿರೀಕ್ಷಕರು, ಒಬ್ಬರು ಕಂದಾಯ ಅಧಿಕಾರಿ, ಐವರು ಬಿಲ್‌ ಕಲೆಕ್ಟರ್‌ಗಳ ಅಗತ್ಯ ಇದೆ. ಈ ಎಲ್ಲ ಹುದ್ದೆಗಳನ್ನು ತುಂಬಿದರೆ ಮಾತ್ರ ಪುರಸಭೆ ಪೂರ್ಣ
ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿ, ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ.

ADVERTISEMENT

ಸದ್ಯ, ನಡೆಯುತ್ತಿರುವ ಪುರಸಭೆಯ ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ, ಬಯಲು ರಂಗಮಂದಿರ, ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಸಹ ಬೇಕಿದೆ.

ಪುರಸಭೆಯಾಗುವತ್ತ ನಡೆದು ಬಂದ ಹಾದಿ: ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಚರಿತಾಪ್ರಕಾಶ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದ 2014ರ ಅವಧಿಯಲ್ಲಿ ಕಾನೂನು ಸಲಹೆಗಾರರಾಗಿದ್ದ ಆರ್.ಕೆ.ನಾಗೇಂದ್ರ ಬಾಬು ಅವರ ಮಾರ್ಗ ದರ್ಶನದಲ್ಲಿ ನೀಲನಕಾಶೆ ಸಿದ್ಧಪಡಿಸಿ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬ ನಿರ್ಣಯ ಕೈಗೊಂಡು ಪೂರಕ ದಾಖಲೆಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸ ಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಯಿಂದಾಗಿ ಈ ಬೇಡಿಕೆ ಈಡೇರಿರಲಿಲ್ಲ.

2021ರ ಜುಲೈ 17ರಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಹೊಸದಾಗಿ ವರದಿ ಸಿದ್ಧಪಡಿಸಿ ಮತ್ತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸ ಲಾಯಿತು. ಆಗಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ಸರ್ಕಾರಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ ಕಳುಹಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ನಿಯೋಗ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು.

ಪಟ್ಟಣ ಪಂಚಾಯಿತಿ ಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಕಳೆದ ಜನವರಿಯಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಾಲಾವಕಾಶ ಕೋರಿ ಮೇಲ್ಮನವಿ ಸಲ್ಲಿಸಿತ್ತು. ಇದರಿಂದ ನಾಗರಿಕರಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೇರುವ ಕುರಿತು ಗೊಂದಲ, ಆತಂಕ ಉಂಟಾಗಿತ್ತು.‌ ನಂತರ ನಿರ್ಧಾರ ಬದಲಿಸಿದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪುರಸಭೆಗೆ ಸೇರಲು ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.