
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಧುಮೇಹ ಏರುಗತಿಯಲ್ಲಿದೆ. ಕಳೆದೆರಡು ಸಾಲುಗಳಿಗಿಂತ ಹಿಂದೆ ಕೇವಲ 5ರಷ್ಟಿದ್ದ ಮಧುಮೇಹಿಗಳ ಪ್ರಮಾಣ ನಂತರ ಶೇ 9ಕ್ಕೆ ಏರಿಕೆಯಾಯಿತು. ಕಳೆದ ವರ್ಷ ಶೇ 12ಕ್ಕೆ ಹೆಚ್ಚಿತು. ಈ ವರ್ಷ ಶೇ 15 ತಲುಪಿದೆ ಎಂದು ಆರೋಗ್ಯ ಇಲಾಖೆಯ ಅಂಕಿ–ಅಂಶಗಳು ಹೇಳುತ್ತವೆ.
ಇದಕ್ಕೆಂದೇ ಆರೋಗ್ಯ ಇಲಾಖೆಯು 30 ವರ್ಷ ತುಂಬಿದ ಎಲ್ಲರಿಗೂ ಮಧುಮೇಹ ಮಾತ್ರವಲ್ಲ ರಕ್ತದೊತ್ತಡ ಪರೀಕ್ಷೆಯನ್ನೂ ಮಾಡುತ್ತಿದೆ. ಈ ರೀತಿ ಜಿಲ್ಲೆಯಲ್ಲಿ 2.75 ಲಕ್ಷ ಮಂದಿಯನ್ನು ತಪಾಸಣೆಗೆ ಒಳಪಡಿಸಿತು. ಇವರಲ್ಲಿ 34,080 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 13,939, ಕುಶಾಲನಗರ ತಾಲ್ಲೂಕು ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 12,626 ಹಾಗೂ ಮಡಿಕೇರಿ ತಾಲ್ಲೂಕಿನಲ್ಲಿ 7,515 ಮಂದಿಯಲ್ಲಿ ಮಧುಮೇಹ ಪತ್ತೆಯಾಗಿದೆ.
ಈ ಕಾಯಿಲೆ ಮುಖ್ಯವಾಗಿ ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಜೀವನ ಶೈಲಿ ಬದಲಾಯಿಸಿ, ಉತ್ತಮ ಆಹಾರ ಪದ್ಧತಿ ಅನುಸರಿಸಿದರೆ ಮಧುಮೇಹವನ್ನು ದೂರ ಇಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಹೇಳುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಟೈಪ್–1 ಮಧುಮೇಹ ಇವರಲ್ಲಿ ಅಧಿಕವಾಗುತ್ತಿದೆ. ಹಾಗಾಗಿ, ಮಕ್ಕಳನ್ನು ಜಂಕ್ ಫುಡ್‌ಗಳಿಂದ ದೂರವಿರಿಸಬೇಕು, ಮೊಬೈಲ್, ಟಿವಿಗಳ ಬದಲಿಗೆ ಆಟ, ದೈಹಿಕ ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳುತ್ತಾರೆ.
ಮಧುಮೇಹದಿಂದ ನರರೋಗ, ಮೂತ್ರಕೋಶ ಸಂಬಂಧಿ ರೋಗ ಮತ್ತು ಕಣ್ಣಿನ ಸಮಸ್ಯೆಯಂತಹ ಕಾಯಿಲೆಗಳ ಜೊತೆಗೆ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ರೋಗಗಳೂ ಬರಬಹುದು. ಹಾಗಾಗಿ, ಮಧುಮೇಹ ಬಂದ ಮೇಲೆ ಅದನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ವೈದ್ಯರಿಂದ ಚಿಕಿತ್ಸೆ, ಔಷಧ ಪಡೆದುಕೊಳ್ಳಲೇ ಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದೆ ಅಪಾಯ ಕಟ್ಟಿಟ್ಟಬುತ್ತಿ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.