ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಒಟ್ಟು 2,519 ಮಕ್ಕಳು ಅತಿಸಾರಕ್ಕೆ ಒಳಾಗಾದರು. ಅವರಲ್ಲಿ ನಿರ್ಜಲೀಕರಣಕ್ಕೆ ಒಳಗಾದವರು 2,239. 438 ಮಕ್ಕಳು ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಈ ಅಂಕಿಅಂಶಗಳು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅತಿಸಾರ ಭೇದಿ ತಡೆಯುವಿಕೆ ಅಭಿಯಾನ ಕುರಿತ ಸಭೆಯಲ್ಲಿ ಪ್ರಸ್ತಾಪವಾಯಿತು.
ಅತಿಸಾರಕ್ಕೆ ಮುಖ್ಯ ಕಾರಣ ಸ್ವಚ್ಛತೆ ಇಲ್ಲದೇ ಇರುವುದೇ ಆಗಿದೆ. ಹಾಗಾಗಿ, ‘ಆರೋಗ್ಯ ಶಿಕ್ಷಣ’ದ ಮೂಲಕ ಕೊಡಗು ಜಿಲ್ಲೆಯಲ್ಲಿ ಅರಿವು ಮೂಡಿಸಿದರೆ ಮುಂಬರುವ ದಿನಗಳಲ್ಲಿ ಮಕ್ಕಳು ಅತಿಸಾರಕ್ಕೆ ಒಳಗಾಗುವುದನ್ನು ತಡೆಯಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು.
ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇ ಪದೇ ಅತಿಸಾರ ಭೇದಿ ಉಂಟಾಗುತ್ತದೆ. ಆದ್ದರಿಂದ ಅತಿಸಾರ ತಡೆಯುವಲ್ಲಿ ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ ಎಂದು ಪ್ರತಿಪಾದಿಸಿದರು.
ಅತಿಸಾರ ನಿಯಂತ್ರಣ ಮತ್ತು ತಡೆಯುವಿಕೆ ಕುರಿತು ಸ್ವಚ್ಛತೆ, ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಓಆರ್‌ಎಸ್ ಮತ್ತು ‘ಜಿಂಕ್’ ಲಭ್ಯತೆ ಕಾಯ್ದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್, ‘ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನವು ಈಗಾಗಲೇ ಆರಂಭವಾಗಿದೆ. ಜುಲೈ 31ರವರೆಗೆ ಸಮುದಾಯ ಮತ್ತು ಗ್ರಾಮೀಣ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದೆ’ ಎಂದು ತಿಳಿಸಿದರು.
ಅತಿಸಾರ ಭೇದಿ ತಡೆಯುವಿಕೆ ಅಭಿಯಾನದಡಿ ಸಮುದಾಯ ಮತ್ತು ಗ್ರಾಮಮಟ್ಟದಲ್ಲಿ ಓಆರ್‌ಎಸ್ ಹಂಚುವುದು ಮತ್ತು ಅದನ್ನು ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೈ ತೊಳೆಯುವ ವಿಧಾನ ಕುರಿತು ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಗರ ಪ್ರದೇಶದಲ್ಲಿ ಸಂಚಾರಿ ಆರೋಗ್ಯ ತಂಡದ ಮೂಲಕ ಜಾಗೃತಿ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಕೇಂದ್ರ ಮಟ್ಟದಲ್ಲಿ ಓಆರ್‌ಎಸ್ ಮತ್ತು ಜಿಂಕ್ ಕೇಂದ್ರ ಆರಂಭವಾಗಿದೆ. ಅತಿಸಾರ ಭೇದಿಯ ಪ್ರಕರಣಗಳಲ್ಲಿ ನಿಗದಿತ ಮಾರ್ಗಸೂಚಿಯ ಪ್ರಕಾರವೇ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ನೀರಿನ ಟ್ಯಾಂಕ್‍ಗಳನ್ನು ಶುಚಿಗೊಳಿಸುವುದು ಸಹ ಅತೀ ಮುಖ್ಯವಾಗಿದೆ ಎಂದು ಅವರು ಹೇಳಿದರು.
ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನದಡಿ ಸ್ವಚ್ಛತೆ ಇಲ್ಲದ ಪ್ರದೇಶಗಳಿಗೆ ಭೇಟಿ ನೀಡಿ ಅರಿವು ಮೂಡಿಸುವುದು, ಅಲೆಮಾರಿ ಜನರು ಹಾಗೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಜನರಿಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಕೈತೊಳೆಯುವ ವೈಜ್ಞಾನಿಕ ವಿಧಾನವನ್ನು ಶಾಲಾ ಮಕ್ಕಳಿಗೆ ತಿಳಿಸುವಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ಭಿತ್ತಿಪತ್ರ ಹಾಗೂ ಗೋಡೆ ಬರಹಗಳ ಮೂಲಕ ಅರಿವು ಮೂಡಿಸುವುದು, ಶಾಲೆಗಳಲ್ಲಿ ಬೆಳಿಗ್ಗೆಯ ಪ್ರಾರ್ಥನೆಯ ನಂತರ ಕೈತೊಳೆಯುವ ಮಹತ್ವ ಮತ್ತು ಲಾಭ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.
ಮಧ್ಯಾಹ್ನ ಊಟಕ್ಕಿಂತ ಮೊದಲು ಕಡ್ಡಾಯವಾಗಿ ಸಾಬೂನಿನಿಂದ ಕೈತೊಳೆದು ಊಟ ಮಾಡುವಂತೆ ಪ್ರೇರೇಪಿಸುವುದು ಈ ಜಾಗೃತಿಯನ್ನು ಅಭಿಯಾನ ಸಂದರ್ಭದಲ್ಲಿ ನಡೆಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಾಲಾ ಶಿಕ್ಷಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರಾಭಿವೃದ್ಧಿ, ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ, ಕಾರ್ಮಿಕ, ವೈದ್ಯಕೀಯ ಕಾಲೇಜು ಹಾಗೂ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶರತ್‌ಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಚೇತನ್ (ಮಡಿಕೇರಿ), ಡಾ.ಯತಿರಾಜು (ವಿರಾಜಪೇಟೆ), ಡಾ.ಇಂದೂಧರ (ಸೋಮವಾರಪೇಟೆ), ಇಂಡಿಯನ್ ಮೆಡಿಕಲ್ ಅಸೋಷಿಯೇಷನ್‍ನ ಪ್ರತಿನಿಧಿ ಡಾ.ಶ್ಯಾಮ್ ಅಪ್ಪಣ್ಣ, ಪರಿಸರ ಅಧಿಕಾರಿ ರಘುರಾಮ್, ಮಕ್ಕಳ ತಜ್ಞ ವೈದ್ಯರಾದ ಕುಶ್ವಂತ್ ಕೋಳಿಬೈಲು, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಊಟಕ್ಕಿಂತ ಮೊದಲು ಸಾಬೂನಿನಿಂದ ಕೈತೊಳೆಯಬೇಕು ಸ್ಥಳೀಯ ಸಂಸ್ಥೆಗಳು ಶುದ್ಧ ಕುಡಿಯುವ ನೀರು ಪೂರೈಸಬೇಕು ಹಲವು ಸೂಚನೆಗಳನ್ನು ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ
ತಾಯಂದಿರೊಂದಿಗೆ ಸಮಾಲೋಚನೆ ಓಆರ್‌ಎಸ್ ದ್ರಾವಣ ತಯಾರಿಕೆ ಮತ್ತು ಜಿಂಕ್ ಮಾತ್ರೆ ಬಳಕೆ ಸ್ತನ್ಯಪಾನ ಸಂಬಂಧ ಅಂಗನವಾಡಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆತಿಪ್ಪಣ್ಣ ಸಿರಸಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ
ಅತಿಸಾರ ತಡೆಯುವುದಕ್ಕಾಗಿ ಶಾಲಾ ಮಕ್ಕಳಲ್ಲಿ ಜಾಥಾ ಏರ್ಪಡಿಸಿ ಅರಿವು ಮೂಡಿಸಲಾಗುವುದು. ಶೌಚಾಲಯಗಳ ಸ್ವಚ್ಛತೆ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆರಂಗಧಾಮಪ್ಪ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ನಗರ ಪ್ರದೇಶಗಳಲ್ಲಿ ಸುರಕ್ಷಿತ ನೀರು ಪೂರೈಕೆ ಬಗ್ಗೆ ಗಮನಹರಿಸಲಾಗಿದೆ. ಸಂಚಾರ ತಂಡಗಳ ನಿಯೋಜನೆ ಮಾಡಬೇಕಿದೆ. ಓಆರ್‌ಎಸ್ ಮತ್ತು ಜಿಂಕ್ ಮಾತ್ರೆ ಬಗ್ಗೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ವಾಹನಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತದೆಎಚ್.ಆರ್.ರಮೇಶ್ ಪೌರಾಯುಕ್ತ
ಅತಿಸಾರ ಭೇದಿ ನಿಯಂತ್ರಣ ಅಭಿಯಾನ ಕುರಿತು ಗ್ರಾಮೀಣ ಆರೋಗ್ಯ ತರಬೇತಿ ಮೂಲಕ ಸಮುದಾಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದುಡಾ.ನಂಜುಂಡಯ್ಯ ಜಿಲ್ಲಾ ಶಸ್ತ್ರಚಿಕಿತ್ಸಕ
6 ತಿಂಗಳಿನಲ್ಲಿ 3 ಡೆಂಗಿ ಪ್ರಕರಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ ‘ಕೊಡಗು ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 3 ಡೆಂಗಿ ಪ್ರಕರಣಗಳು ಕಂಡು ಬಂದಿವೆ. ಮೂವರೂ ಸಹ ಗುಣಮುಖರಾಗಿದ್ದಾರೆ’ ಎಂದು ತಿಳಿಸಿದರು. ಡೆಂಗಿ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ. ಸುತ್ತಮುತ್ತಲಿನ ಪರಿಸರ ಶುಚಿತ್ವ ಅತೀ ಮುಖ್ಯ. ಟೈರು ತೆಂಗಿನ ಚಿಪ್ಪು ಡಬ್ಬಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪಾದನೆಯಾಗದಂತೆ ಗಮನಹರಿಸಬೇಕು. ಚರಂಡಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದರು.
ನಗರ ತಂಬಾಕು ನಿಯಂತ್ರಣ ಕೋಶ ರಚನೆಗೆ ನಿರ್ಧಾರ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನಗರ ತಂಬಾಕು ನಿಯಂತ್ರಣ ಕೋಶ ರಚಿಸಿ ತಂಬಾಕು ವ್ಯಾಪಾರಿಗಳಿಗೆ ಪ್ರತ್ಯೇಕ ಪರವಾನಿಗೆ ನೀಡಲು ಸಭೆ ನಿರ್ಧರಿಸಿತು. ತಂಬಾಕು ಪರವಾನಿಗೆಯ ಮಾಹಿತಿ ನೀಡುವುದು ಜಿಲ್ಲಾ ಆಸ್ಪತ್ರೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರಕ್ಕೆ ಕೊಠಡಿ ವ್ಯವಸ್ಥೆ ಕಲ್ಪಿಸುವುದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಎಂಬ ನಾಮಫಲಕ ಅಳವಡಿಸುವುದು. ಶಾಲೆ ಮತ್ತು ಕಾಲೇಜುಗಳಲ್ಲಿ ಒಬ್ಬ ಶಿಕ್ಷಕರು ಉಪನ್ಯಾಸಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಟಿಒಎಫ್‍ಇಐ (ಟೊಬೆಕೋ ಫ್ರೀ ಎಜುಕೇಷನ್ ಶಿಕ್ಷಣ ಸಂಸ್ಥೆ) ಯ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮತ್ತಿತರ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯ ಸಿಆರ್‍ಪಿ ಮತ್ತು ಬಿಆರ್‍ಸಿಗಳಿಗೆ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಎಂಬ ತಂತ್ರಾಂಶದ ಕುರಿತು ವಿಡಿಯೋ ಸಂವಾದ ಮೂಲಕ ತರಬೇತಿ ನೀಡಲು ಇದೇ ಸಂದರ್ಭದಲ್ಲಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
2024–25ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿಸಾರ ಒಟ್ಟು ಅತಿಸಾರಕ್ಕೆ
ಒಳಗಾದ ಮಕ್ಕಳು;2,519
ನಿರ್ಜಲೀಕರಣಕ್ಕೆ ಒಳಗಾದವರು;2,239
ಆಸ್ಪತ್ರೆಗೆ ದಾಖಲಾದವರು;438
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.