ADVERTISEMENT

ಕಲಬುರಗಿ| ಬ್ರಾಹ್ಮಣರು ಮುಕ್ತವಾಗಿ ಯೋಚಿಸಲಿ: ದಿನೇಶ್ ಗುಂಡೂರಾವ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 8:40 IST
Last Updated 9 ಫೆಬ್ರುವರಿ 2026, 8:40 IST
ಕಲಬುರಗಿಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ವಿಪ್ರಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ದಿನೇಶ್ ಗುಂಡೂರಾವ್‌, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಸೇರಿದಂತೆ ಹಲವರು ಇದ್ದಾರೆ            ಪ್ರಜಾವಾಣಿ ಚಿತ್ರ
ಕಲಬುರಗಿಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ವಿಪ್ರಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಚಿವ ದಿನೇಶ್ ಗುಂಡೂರಾವ್‌, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಸೇರಿದಂತೆ ಹಲವರು ಇದ್ದಾರೆ            ಪ್ರಜಾವಾಣಿ ಚಿತ್ರ   

ಕಲಬುರಗಿ: ‘ನಮ್ಮ ಸರ್ಕಾರಕ್ಕೆ ಎಲ್ಲ ಸಮುದಾಯಗಳೂ ಒಂದೇ. ಸರ್ಕಾರ ಭೇದಭಾವ ಮಾಡಲ್ಲ. ಆದರೆ, ನೀವು ಯಾವುದೋ ಒಂದೇ ಕಡೆ ನಿಂತು ಕಣ್ಣುಮುಚ್ಚಿಕೊಂಡು ಅವರು ಮಾತ್ರವೇ ಸರಿ ಎನ್ನಬಾರದು. ಬ್ರಾಹ್ಮಣರು ಬುದ್ಧಿಜೀವಿಗಳು. ಈ ಸಮಾಜದವರು ಮುಕ್ತವಾಗಿ ಯೋಚಿಸಬೇಕು’ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಕಿವಿಮಾತು ಹೇಳಿದರು.

ನಗರದ ಉದನೂರು ರಸ್ತೆಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ವಿಪ್ರ ಸ್ವ–ಉದ್ಯಮ ನೇರ ಸಾಲ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮನ್ನು ಬ್ರಾಹ್ಮಣರ ವಿರೋಧಿ, ಮೇಲ್ವರ್ಗ ವಿರೋಧಿ ಸರ್ಕಾರ ಎಂದು ಟೀಕಿಸಲಾಗುತ್ತದೆ. ಹಿಂದಿನ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಸರಿಯಾದ ಅನುದಾನವೇ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ‌ ಸಮರ್ಪಕ ಅನುದಾನ ಕೊಡುತ್ತಿದೆ. ಆದರೂ, ನಮ್ಮನ್ನು ಬ್ರಾಹ್ಮಣ ವಿರೋಧಿಗಳು ಎಂದು ಬಿಂಬಿಸುವ ಕೆಲಸ ನಡೆಯುತ್ತದೆ; ಬಿಂಬಿಸುವುದು ಬೇರೆ, ನಿಜಾಂಶವೇ ಬೇರೆ. ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದರು. ಆರ್‌.ವಿ.ದೇಶಪಾಂಡೆ, ನಾನು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದೆವು. ವಿರೋಧಿಗಳು ಎಂದುಕೊಂಡಿದ್ದರೆ ನಮ್ಮ ಸರ್ಕಾರ ರಾಜ್ಯಮಟ್ಟದ ಕನಕ ಪ್ರಶಸ್ತಿ ಬ್ರಾಹ್ಮಣರಿಗೆ ಕೊಡಲು ಸಾಧ್ಯವಿತ್ತೆ?’ ಎಂದು ಕೇಳಿದರು.

ADVERTISEMENT

‘ಯಾವುದೇ ಸಮಾಜ ಸ್ವಯಂ ಬದಲಾವಣೆ ಆಗಲ್ಲ. ಪ್ರಗತಿಪರ ಚಿಂತನೆ, ಹೊಸ ವಿಚಾರಗಳಿಂದ ಮಾತ್ರವೇ ಪರಿವರ್ತನೆ ಸಾಧ್ಯ. ಸಂಸತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಿಂದೂ ಕೋಡ್‌ ಬಿಲ್ ತಂದಾಗ ಯಥಾಸ್ಥಿತಿವಾದಿಗಳಿಂದ ಅದಕ್ಕೆ ಮನ್ನಣೆ ಸಿಗಲಿಲ್ಲ. ಬಳಿಕ ಅಂಬೇಡ್ಕರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಮತ್ತೆ ಐದಾರು ವರ್ಷಗಳ ಬಳಿಕ ಆ ಸುಧಾರಣೆ ಕ್ರಮ ಜಾರಿಗೊಂಡಿತು. ಅದರ ಫಲವಾಗಿ ಇದೀಗ ಎಲ್ಲಡೆ ಮಹಿಳೆಯರಿಗೆ ಸಮಾನ ಅವಕಾಶ, ಹಕ್ಕುಗಳು ಲಭಿಸಿವೆ. ವೈದ್ಯಕೀಯ, ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸ್ತ್ರೀಯರೇ ವಿಪುಲವಾಗಿ ಕಾಣಿಸುತ್ತಾರೆ’ ಎಂದರು.

‘‍ಎಲ್ಲ ಸಮಾಜದಂತೆ ವಿಪ್ರ ಸಮಾಜದಲ್ಲೂ ಬಹಳಷ್ಟು ಬಡವರಿದ್ದಾರೆ; ಸಮಸ್ಯೆಗಳೂ ಇವೆ. ಆ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸದೇ  ಪರಿಹರಿಸಿಕೊಳ್ಳುವುದು ಕಷ್ಟ. ಅದಕ್ಕೆ ಬ್ರಾಹ್ಮಣರು ಸಂಘಟಿತರಾಗಬೇಕು. ಆದರೆ, ಬುದ್ಧಿವಂತರ ಸಮಾಜದಲ್ಲಿ ಒಗ್ಗಟ್ಟು ಕಷ್ಟ. ಒಬ್ಬೊಬ್ಬರದೂ ಒಂದೊಂದು ಅಭಿಪ್ರಾಯ ಇರುತ್ತದೆ. ಆದರೂ, ಒಗ್ಗೂಡಿ ಚರ್ಚಿಸಿದಾಗಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಡಳಿಯಿಂದ ಸಮಾಜಕ್ಕೆ ಇರುವ ಸೌಲಭ್ಯಗಳನ್ನು ಪಟ್ಟಿ ಮಾಡಿದರು. ‘ಕಾಂಗ್ರೆಸ್‌ ಸರ್ಕಾರ ಮಂಡಳಿಗೆ ಅನುದಾನ ಕೊರತೆ ಮಾಡಿಲ್ಲ’ ಎಂದ ಅವರು, ‘ಕಲಬುರಗಿಯಲ್ಲಿ 15 ಸಾವಿರ ಅಡಿ ನಿವೇಶನ ಕೇಳಿದ್ದು, ಈ ಸಂಬಂಧ ಸಚಿವ ಸಂಪುಟದಲ್ಲಿ ಇಟ್ಟು ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದ್ದಾರೆ’ ಎಂದರು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಪಾಲಿಕೆ ವಿರೋಧ ಪಕ್ಷದ ನಾಯಕಿ ಶೋಭಾ ಜಿ.ದೇಸಾಯಿ, ಕುಡಾ ಅಧ್ಯಕ್ಷ ಮಜಹರ್‌ ಆಲಂಖಾನ್‌, ಮುಖಂಡರಾದ ವಿನೋದಾಚಾರ್ಯ ಗಲಗಲಿ, ರಾಘವೇಂದ್ರ ಕೊಗನೂರ, ವೆಂಕಟೇಶ ಕುಲಕರ್ಣಿ, ಪ್ರಶಾಂತ ಕೊರಳ್ಳಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ ಕೆ., ಕಾಂಗ್ರೆಸ್‌ ಮುಖಂಡ ರಾಜೀವ್ ಜಾನೆ ಸೇರಿದಂತೆ ಹಲವರು ವೇದಿಕೆಯಲ್ಲಿ ಇದ್ದರು.

ಕಲಬುರಗಿಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಾಧಕ ವಿದ್ಯಾರ್ಥಿನಿಯೊಬ್ಬರಿಗೆ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಸಚಿವ ದಿನೇಶ್ ಗುಂಡೂರಾವ್‌ ಪ್ರದಾನ ಮಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ ವಿಧಾನ ಪರಿಷತ್‌ ಸದಸ್ಯರಾದ ಜಗದೇವ ಗುತ್ತೇದಾರ ಶಶೀಲ್‌ ಜಿ.ನಮೋಶಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಮತ್ತಿತರರು ಪಾಲ್ಗೊಂಡಿದ್ದರು   ಪ್ರಜಾವಾಣಿ ಚಿತ್ರ

Quote - ಕಲಬುರಗಿಯಲ್ಲಿ ಅತಿ ಹೆಚ್ಚು ಬ್ರಾಹ್ಮಣ ಸಮುದಾಯದವರಿದ್ದಾರೆ. ಹೀಗಾಗಿ ಅಭಿವೃದ್ಧಿ ಮಂಡಳಿಗೆ ಇಲ್ಲಿನವರನ್ನು ಸದಸ್ಯರನ್ನಾಗಿ ನೇಮಿಸಲು ಸಚಿವ ದಿನೇಶ್‌ ಗುಂಡೂರಾವ್‌ ಕ್ರಮವಹಿಸಬೇಕು ಅಲ್ಲಮಪ್ರಭು ‍ಪಾಟೀಲ ಶಾಸಕ

Cut-off box - 61 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ 61 ವಿದ್ಯಾರ್ಥಿಗಳಿಗೆ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’ ಪ್ರದಾನ ಮಾಡಲಾಯಿತು. ಪ್ರತಿಯೊಂದು ಜಿಲ್ಲೆಯ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ₹15 ಸಾವಿರ ₹10 ಸಾವಿರ ಮತ್ತು ₹5 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಪಂ.ಗೋಪಾಲಾಚಾರ್ಯ ಅಕಮಂಚಿ ಗುರುರಾಜ ದೇಶಪಾಂಡೆ ಶಶಾಂಕ ರಾಮದುರ್ಗ ಧನಂಜಯ ಕುಲಕರ್ಣಿ ಕಿಶನರಾವ ಕುಲಕರ್ಣಿ ರಂಗನಾಥ ದೇಸಾಯಿ ಅವರಿಗೆ ‘ವಿಪ್ರಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳ 20 ಸಾಧಕರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.