ADVERTISEMENT

‘ಗೊಂದಲಕ್ಕೆ ಅವಕಾಶ ಬೇಡ’: ಈ.ರಾ.ದುರ್ಗಾಪ್ರಸಾದ್ ಮನವಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 12:35 IST
Last Updated 17 ಮಾರ್ಚ್ 2020, 12:35 IST

ಮಡಿಕೇರಿ: ‘ಕೇಂದ್ರ ಸರ್ಕಾರ ಜನಗಣತಿಗಾಗಿ ಎನ್‌ಪಿಆರ್ ಫಾರಂನ್ನು ಬಳಸಿ, ರಾಷ್ಟ್ರೀಯ ನಾಗರಿಕ ರಿಜಿಸ್ಟರ್ ತಯಾರಿಸುವ ಉದ್ದೇಶವಿದ್ದು, ಪ್ರತಿಯೊಬ್ಬರೂ ವಿರೋಧಿಸಬೇಕು’ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಮುಖಂಡ ಈ.ರಾ.ದುರ್ಗಾಪ್ರಸಾದ್ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಏಪ್ರಿಲ್ 1ರಿಂದ ಎನ್‌ಪಿಆರ್ ಫಾರಂ ಮೂಲಕ ಜನಗಣತಿ ಆರಂಭಿಸುತ್ತಿದ್ದು, ಇದರಲ್ಲಿ ತಂದೆ-ತಾಯಂದಿರ ಹುಟ್ಟಿದ ದಿನಾಂಕ ಮತ್ತು ಸ್ಥಳವನ್ನು ಸೇರಿಸಲಾಗಿದೆ. ಹೆಚ್ಚಿನವರಿಗೆ ತಂದೆ/ತಾಯಂದಿರ ಹುಟ್ಟಿದ ದಿನಾಂಕ ಗೊತ್ತಿರುವುದಿಲ್ಲ. ಅವರು ಎಲ್ಲಿ ಹುಟ್ಟಿದ್ದಾರೆ ಎಂಬುದಕ್ಕೆ ಪುರಾವೆ ದೊರೆಯುವುದಿಲ್ಲ. ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಾಗದಿದ್ದರೆ ಹೆಸರಿನ ಮುಂದೆ ಸಂಶಯಾಸ್ಪದ ಎಂದು ನಮೂದಿಸಲಾಗುತ್ತದೆ. ಈ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಎನ್‌ಪಿಆರ್, ಎನ್‌ಆರ್‌ಸಿಯ ಮೊದಲ ಹಂತವಾಗಿದ್ದು, ಅಸ್ಸಾಂನಲ್ಲಿ ಎನ್‌ಆರ್‌ಸಿ ಸಂದರ್ಭ 19 ಲಕ್ಷ ಬಡ ಜನರನ್ನು ಪೌರತ್ವ ಪಟ್ಟಿಯಿಂದ ಹೊರಗಿಡಲಾಗಿದೆ. ಇದಕ್ಕೆ ಕಾರಣ ಎನ್‌ಪಿಆರ್‌ನಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗದಿರುವುದು ಎಂದು ಸ್ಪಷ್ಟಪಡಿಸಿದರು.

ADVERTISEMENT

‘ನಮ್ಮಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐ.ಡಿ, ಪಾನ್‌ ಕಾರ್ಡ್, ಪಾಸ್‌ ಪೋರ್ಟ್, ಚಾಲಕರ ಪರಾವನಗಿ ಸೇರಿದಂತೆ ಹಲವು ದಾಖಲೆಗಳು ಇವೆ. ನಾವು ಭಾರತೀಯರು ಎಂದು ಹೇಳಲು ಇಷ್ಟು ಪುರಾವೆ ಸಾಕಾಗುತ್ತದೆ. ಆದ್ದರಿಂದ, ಎನ್‌ಪಿಆರ್ ಜನಗಣತಿ ಸಂದರ್ಭ ಅವರ ಪ್ರಶ್ನೆಗಳಿಗೆ ಉತ್ತರಿಸದೇ ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು‘ ಎಂದು ಮನವಿ ಮಾಡಿದರು.

‘ಇಂದು ಸರ್ಕಾರದ ಆರ್ಥಿಕ ನೀತಿಯಿಂದ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ನಿರುದ್ಯೋಗ, ಅವಶ್ಯಕ ವಸ್ತುಗಳ ಬೆಲೆ ಏರಿಕೆಯಂತಹ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗದ ಸರ್ಕಾರ ಎನ್‌ಪಿಆರ್, ಎನ್‌ಆರ್‌ಸಿಗಾಗಿ ₹ 54 ಸಾವಿರ ಕೋಟಿ ಖರ್ಚು ಮಾಡಲು ಹೊರಟಿದೆ‘ ಎಂದರು.

ಪ್ರದಾನಿ ಮೋದಿ ಸರ್ಕಾರದ ಹಾದಿ ಭಾರತಕ್ಕೆ ಅಪಾಯಕಾರಿಯಾಗಿದೆ. ಅದು ಭಾರತವನ್ನು ಧರ್ಮದ ಹೆಸರಿನಲ್ಲಿ ಇನ್ನಷ್ಟು ವಿಭಜನೆ ಮಾಡಲಿದೆ. ಇದರಿಂದ ನಮ್ಮ ಶತ್ರುಗಳಿಗೆ ಮಾತ್ರ ಸಂತೋಷವಾಗಲಿದ್ದು, ಎಲ್ಲಾ ಜಾತಿ ಧರ್ಮದ ಜನತೆ ಅಡ್ಡಗೋಡೆಯನ್ನು ದಾಟಿ ಭಾರತವನ್ನು ರಕ್ಷಿಸಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಸಂಘಟನಾ ಸಮಿತಿ ಸದಸ್ಯ ಎ.ಸಿ.ಸಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.