ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ಪ್ರಕೋಪ ದಿನೇ ದಿನೇ ಹೆಚ್ಚುತ್ತಿದ್ದು, ಜನಸಾಮಾನ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನೂ ಇನ್ನಿಲ್ಲದಂತೆ ಬಾಧಿಸುತ್ತಿದೆ. ಅದರಲ್ಲೂ ನಾಯಿಗಳಂತೂ ಬಿಸಿಲಿಗೆ ಹೆಚ್ಚಾಗಿ ಬಸವಳಿಯುತ್ತಿವೆ.
ಬಿಸಿಲನ್ನು ತಾಳಲಾರದೇ ಬಹುತೇಕ ಎಲ್ಲ ನಾಯಿಗಳು ನೆರಳನ್ನು ಹುಡುಕುತ್ತಿವೆ. ಅವುಗಳಿಗೆ ನಿಲ್ಲಿಸಿದ ಕಾರುಗಳು, ವ್ಯಾನ್‌ಗಳೇ ಈಗ ನೆರಳು ನೀಡುವ ತಾಣಗಳಾಗಿವೆ. ಬೇರೆ ಜಿಲ್ಲೆಗಳ ಪಟ್ಟಣ, ನಗರಗಳಲ್ಲಿ ರಸ್ತೆ ಬದಿಯಲ್ಲಿ ಸಾಕಷ್ಟು ಮರಗಳಿರುವುದರಿಂದ ಅಲ್ಲಿನ ನಾಯಿಗಳು ಮರಗಳ ಬುಡದಲ್ಲಿ, ನೆರಳಲ್ಲಿ ಮಲಗಿ ಬಿಸಿಲಿನ ಬೇಗೆಯನ್ನು ತಣಿಸಿಕೊಳ್ಳುತ್ತವೆ.
ಆದರೆ, ಮಡಿಕೇರಿ ನಗರದ ರಸ್ತೆಗಳ ಬದಿಗಳಲ್ಲಿ ಮರಗಳನ್ನು ಹುಡುಕುವಂತಹ ಸ್ಥಿತಿ ಇದೆ. ಇದರಿಂದ ನೆರಳು ಎನ್ನುವುದು ಇಲ್ಲಿ ಸಿಗುವುದು ಕಷ್ಟ. ಹಾಗಾಗಿ, ಇಲ್ಲಿನ ನಾಯಿಗಳಿಗೆ ನಿಲ್ಲಿಸಿರುವ ವಾಹನಗಳೇ ನೆರಳು ನೀಡುವ ಆಶ್ರಯತಾಣಗಳಾಗಿವೆ.
ನಿಲ್ಲಿಸಿದ್ದ ವಾಹನಗಳನ್ನು ಚಾಲನೆ ಮಾಡುವಾಗ ಚಾಲಕರು ವಾಹನಗಳ ಕೆಳಗೆ ನೋಡದೇ ಮಲಗಿರುವ ನಾಯಿಗಳ ಮೇಲೆಯೇ ವಾಹನ ಚಾಲನೆ ಮಾಡಿರುವ ಘಟನೆಗಳು ಹೆಚ್ಚುತ್ತಿವೆ. ಹಲವು ನಾಯಿಗಳಿಗೆ ಇದರಿಂದ ಗಾಯಗಳಾಗಿವೆ. ಎಚ್ಚರವಿದ್ದ ನಾಯಿಗಳು ವಾಹನಗಳ ಕೆಳಭಾಗದಿಂದ ಬೇಗನೇ ಓಡಿ ಬಿಡುತ್ತವೆ. ಆದರೆ, ನಿದ್ದೆಗೆ ಜಾರಿದ ನಾಯಿಗಳು ಹಾಗೂ ಎದ್ದು ಹೊರಡುವಾಗ ಚಕ್ರಕ್ಕೆ ಸಿಲುಕುತ್ತಿವೆ.
ಇತ್ತೀಚಿನ ದಿನಗಳಲ್ಲಿ ವಾಹನಗಳ ಚಕ್ರಗಳು ಹರಿದು ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಇಲ್ಲಿನ ಕೊಡಗು ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ನ ಅಂಕಿಅಂಶಗಳು ಹೇಳುತ್ತವೆ.
ಈ ಕುರಿತು ‘ಪ್ರಜಾವಾಣಿ’ ಕೊಡಗು ಜಿಲ್ಲಾ ಪಶುವೈದ್ಯಕೀಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಕ್ಯಾಪ್ಟನ್ ತಿಮ್ಮಯ್ಯ ಅವರನ್ನು ಸಂಪರ್ಕಿಸಿದಾಗ ಅವರು ಈ ವಿಷಯವನ್ನು ದೃಢಪಡಿಸಿದರು.
‘ಇತ್ತೀಚಿನ ದಿನಗಳಲ್ಲಿ ವಾಹನಗಳ ಚಕ್ರಗಳು ಹರಿದು ಗಾಯಗೊಂಡ ನಾಯಿಗಳನ್ನು ಚಿಕಿತ್ಸೆಗಾಗಿ ಕರೆತರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಬಹುತೇಕ ಈ ರೀತಿಯ ಗಾಯಗೊಂಡ ಸಾಕುನಾಯಿಗಳನ್ನೇ ಕ್ಲಿನಿಕ್‌ಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಕಾರನ್ನು ಹೊರತೆಗೆಯುವಾಗ ಮಾಲೀಕರು ಅಂಗಳದಲ್ಲಿ ಬಿಟ್ಟಿರುವ ತಮ್ಮ ನಾಯಿಗಳು ಕಾರಿನಡಿ ಮಲಗಿರುವುದನ್ನು ಗಮನಿಸದೇ ಇರುವುದರಿಂದ ಅವುಗಳು ಚಕ್ರಗಳಿಗೆ ಸಿಲುಕುತ್ತವೆ. ಗಾಯಗೊಂಡಿರುವುದು ಗೊತ್ತಾದ ನಂತರ ಅವರು ಆಸ್ಪತ್ರೆಗೆ ಕರೆ ತರುತ್ತಾರೆ. ಆದರೆ, ಬೀದಿ ನಾಯಿಗಳು ಗಾಯಗೊಂಡರೆ ಆಸ್ಪತ್ರೆಗೆ ಕರೆತರುವವರು ಇಲ್ಲವೇ ಇಲ್ಲ. ಹಿಡಿಯಲು ಹೋದರೆ ಕಚ್ಚುತ್ತವೆ. ಆಗ ವಾಹನ ಚಾಲಕರು ತಮ್ಮ ಪಾಡಿಗೆ ತೆರಳುತ್ತಾರೆ. ಬೀದಿ ನಾಯಿಗಳೋ ಕುಂಟುತ್ತಲೋ, ಬೊಗಳುತ್ತಲೋ, ತೆವಳುತ್ತಲೋ ಸಾಗುತ್ತವೆ.
ಈ ರೀತಿ ಚಕ್ರಗಳು ಹರಿದ ನಾಯಿಗಳು ಬದುಕುವ ಸಾಧ್ಯತೆ ತೀರಾ ಕಡಿಮೆ ಎಂದೇ ವೈದ್ಯರು ಹೇಳುತ್ತಾರೆ. ಒಂದಷ್ಟು ದಿನ ಬದುಕಿದ್ದು ನಂತರ ಅವು ಸಾಯುವ ಸಾಧ್ಯತೆಯೇ ಅಧಿಕವಿದೆ. ಇಲ್ಲವೇ ಅವುಗಳ ಬದುಕುವ ದಿನಗಳು ಕಡಿಮೆಯಾಗುತ್ತವೆ. ಹಾಗಾಗಿ, ವಾಹನ ಚಾಲಕರು ಬೇಸಿಗೆಯ ಈ ದಿನಗಳಲ್ಲಿ ನಿಲ್ಲಿಸಿದ್ದ ತಮ್ಮ ತಮ್ಮ ವಾಹನಗಳನ್ನು ಚಾಲನೆ ಮಾಡುವ ಮೊದಲು ವಾಹನ ಕೆಳಗೆ ಒಮ್ಮೆ ಕಣ್ಣಾಯಿಸಿ ಚಾಲನೆ ಮಾಡಬೇಕಾಗಿದೆ. ಇದರಿಂದ ನಾಯಿಗಳಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು.
ವಾಹನ ಚಾಲನೆ ಮಾಡುವ ಮೊದಲು ಚಾಲಕರು ಎಚ್ಚೆತ್ತುಕೊಳ್ಳಬೇಕು ವಾಹನದ ಕೆಳಗ ನೋಡಿ ಚಾಲನೆ ಮಾಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.