ADVERTISEMENT

ಬರ ಪರಿಹಾರ; ಮುಂದಿನ ಸಂಪುಟದಲ್ಲಿ ತೀರ್ಮಾನ: ಸಚಿವ ಎನ್.ಚೆಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 16:06 IST
Last Updated 3 ನವೆಂಬರ್ 2023, 16:06 IST
ಸಚಿವ ಎನ್  ಚೆಲುವರಾಯಸ್ವಾಮಿ
ಸಚಿವ ಎನ್  ಚೆಲುವರಾಯಸ್ವಾಮಿ   

ಮಡಿಕೇರಿ: ‘ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಬರುವವರೆಗೂ ಕಾಯಬೇಕೋ ಅಥವಾ ನಾವೇ ರೈತರಿಗೆ ಪ‍ರಿಹಾರ ನೀಡಬೇಕೋ ಎಂಬ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ತಿಳಿಸಿದರು.

‘ಕೇಂದ್ರ ಸರ್ಕಾರ ಈ ಬಾರಿ ರಾಜ್ಯವನ್ನು ಹಿಂದೆಂದಿಗಿಂತಲೂ ಹೆಚ್ಚು ಕಡೆಗಣಿಸಿದೆ. ಬರ ಪರಿಹಾರದ ಕುರಿತು ಪ್ರತಿಕ್ರಿಯಿಸಿಲ್ಲ. ನರೇಗಾ ಯೋಜನೆಯಡಿ ₹600 ಕೋಟಿ ಕೂಲಿ ನೀಡಿಲ್ಲ. ಭೇಟಿ ಮಾಡಲೂ ಅವಕಾಶ ಕೊಡುತ್ತಿಲ್ಲ. ಈ ಬಗೆಯ ತಾತ್ಸಾರ ಒಕ್ಕೂಟ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಹೀಗೆ ಮಾಡಿತು ಎಂದು ನಾವು ಸುಮ್ಮನಿರುವುದಿಲ್ಲ. ನಾವು ಯಾವಾಗಲೂ ರೈತರ ಪರವಾಗಿ ನಿಲ್ಲುತ್ತೇವೆ. ಯಾವ ಬಗೆಯಲ್ಲಿ ರೈತರಿಗೆ ನೆರವು ನೀಡಬೇಕು ಎನ್ನುವುದನ್ನು ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಕುರಿತು ಪಕ್ಷದ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿದ್ದರಾಮಯ್ಯ ತೀರ್ಮಾನಿಸುತ್ತಾರೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ’ ಎಂದು ಹೇಳಿದರು.

‌‘ಆಯಾ ಸಮುದಾಯದ ನಾಯಕರು ತಮ್ಮ ಸಮುದಾಯದವರ ಮತಗಳಿಂದ ಅಧಿಕಾರಕ್ಕೆ ಬಂದಿದೆ ಎಂದು ಹೇಳಿಕೊಳ್ಳುವುದು ತಪ್ಪಲ್ಲ. ಆದರೆ, ವಾಸ್ತವದಲ್ಲಿ ಎಲ್ಲ ಸಮುದಾಯದವರ ಮತಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.