ADVERTISEMENT

ಶ್ರೀಮಂಗಲ: ಸಾವಿನ ಮನೆಯಲ್ಲಿ ಮದ್ಯ ನಿಷೇಧಕ್ಕೆ ಮೂಂದ್‌ನಾಡ್ ಕೊಡವ ಸಮಾಜ ನಿರ್ಧಾರ

ಶ್ರೀಮಂಗಲ: ಟಿ.ಶೆಟ್ಟಿಗೇರಿ ಕೊಡವ ಸಮಾಜ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 20:00 IST
Last Updated 1 ಡಿಸೆಂಬರ್ 2019, 20:00 IST
ವಿರಾಜಪೇಟೆ ತಾಲ್ಲೂಕು ಸಮೀಪದ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಮಹಾಸಭೆ ಭಾನುವಾರ ನಡೆಯಿತು
ವಿರಾಜಪೇಟೆ ತಾಲ್ಲೂಕು ಸಮೀಪದ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಮಹಾಸಭೆ ಭಾನುವಾರ ನಡೆಯಿತು   

ಶ್ರೀಮಂಗಲ (ವಿರಾಜಪೇಟೆ ತಾಲ್ಲೂಕು): ಸಮೀಪದ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಮಹಾಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಸಭೆ ನಡೆಯಿತು.

ಸಾವಿನ ಮನೆಯಲ್ಲಿ ಇತ್ತೀಚೆಗೆ ಮದ್ಯ ಬಳಸುವುದು ಹೆಚ್ಚಾಗುತ್ತಿದ್ದು ಇದು ಕೊಡವ ಜನಾಂಗದ ಸಂಸ್ಕೃತಿಗೆ ಹಾಗೂ ಕೊಡವ ಜನಾಂಗಕ್ಕೆ ಧಕ್ಕೆ ತರುತ್ತಿದೆ. ಸಾವಿನ ಮನೆಯಲ್ಲಿ ಎಲ್ಲರೂ ದುಃಖದಲ್ಲಿ ಇರುತ್ತಾರೆ. ಈ ವೇಳೆ ಮದ್ಯಸೇವನೆ ಸರಿಯಲ್ಲ. ಆದ್ದರಿಂದ, ಸಾವಿನ ಮನೆಯಲ್ಲಿ ಮದ್ಯ ಬಳಕೆ ನಿಷೇಧಿಸಬೇಕೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಈಗಾಗಲೇ ನೆಮ್ಮಲೆ ಹಾಗೂ ವಗರೆ ಗ್ರಾಮಗಳಲ್ಲಿ ನಿಷೇಧಿಸಿರುವಂತೆ ತಾವಳಗೇರಿ ಮೂಂದ್‌ನಾಡ್ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಲ್ಲೂ ಸಾವಿನ ಮನೆಯಲ್ಲಿ ಮದ್ಯ ಬಳಕೆ ನಿಷೇಧಿಸುವಂತೆ ಆಯಾ ಗ್ರಾಮಗಳ ಹಾಗೂ ಕೊಡವ ಕುಟುಂಬಗಳ ಮಹಾಸಭೆ ಮತ್ತಿತರ ಕಾರ್ಯಕ್ರಮಗಳಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿ ನಿರ್ದೇಶಕರು ಹಾಜರಾಗಿ ಮನವೊಲಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ADVERTISEMENT

ನೈಜ ಆಯುಧ ಪೂಜೆ:ಕೈಲ್ ಪೊಳ್ದ್, ಕೊಡವರ ನೈಜ ಆಯುಧ ಪೂಜೆ. ತಾವಳಗೇರಿ ಮೂಂದ್‌ನಾಡ್ ವ್ಯಾಪ್ತಿಯ ಎಲ್ಲ ಕೊಡವರು ಇತರೆ ಸಂದರ್ಭಗಳಲ್ಲಿ ಆಯುಧ ಪೂಜೆ ಮಾಡದೇ ಕೈಲ್ ಪೊಳ್ದ್ ದಿನವೇ ಮನೆಗಳಲ್ಲಿ ಆಯುಧ ಹಾಗೂ ವಾಹನಗಳಿಗೆ ಆಯುಧ ಪೂಜೆ ಮಾಡುವಂತೆ ಹಾಗೂ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಸಂತೋಷ ಕೂಟ ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಸ್ತುತ ಕೊಡವ ಸಮಾಜದ ಸದಸ್ಯತ್ವ ಶುಲ್ಕವು ಒಂದು ಸಾವಿರ ರೂಪಾಯಿ ಆಗಿದ್ದು, ಮಾರ್ಚ್ 31ರ ವರೆಗೆ ಈ ಶುಲ್ಕವನ್ನೇ ಮುಂದುವರಿಸುವುದು ಹಾಗೂ ಏಪ್ರಿಲ್ 1ರಿಂದ ₹ 1,500ಗೆ ಹೆಚ್ಚಿಸುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಮಾತನಾಡಿ, ‘ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಾಗುವ ಪಾತ್ರೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಹೊಂದಿದ್ದು ಈ ಅತ್ಯಂತ ಕಡಿಮೆ ಬಾಡಿಗೆಗೆ ಸಮಾಜದ ಕಟ್ಟಡವನ್ನು ನೀಡಲಾಗುತ್ತಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಿದ್ದು, ಇದರಲ್ಲಿ ಸದಸ್ಯರು ವಿವಿಧ ಆಟಗಳನ್ನು ಆಡುವುದರೊಂದಿಗೆ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಯೋಗ ತರಬೇತಿ ಹಾಗೂ ಕೊಡವ ಆಟ್‌ಪಾಟ್ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪುತ್ತರಿ ಹಬ್ಬದ ಸಂದರ್ಭ ತಾವಳಗೇರಿ ಮೂಂದ್‌ನಾಡ್‌ನಲ್ಲಿ ನಾಡ್‌ಕೋಲ್ ಆಚರಣೆ ಸಂದರ್ಭ ಕೊಡವ ಸಮಾಜದ ವತಿಯಿಂದ ವಿವಿಧ ರೀತಿಯ ಸಹಕಾರ ನೀಡಲಾಗುವುದು. ಕೊಡವ ಸಮಾಜ ಹಾಗೂ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಖಜಾಂಜಿ ಚೊಟ್ಟೆಯಾಂಡಮಾಡ ವಿಶು ರಂಜಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ್, ನಿರ್ದೇಶಕರಾದ ಮಾಣೀರ ವಿಜಯ ನಂಜಪ್ಪ, ತಡಿಯಂಗಡ ಕರುಂಬಯ್ಯ, ಚಂಗುಲಂಡ ಅಶ್ವಿನಿ ಸತೀಶ್, ಆಂಡಮಾಡ ಸತೀಶ್, ನಾಡ್‌ತಕ್ಕ ಕೈಬಿಲೀರ ಹರೀಶ್ ಅಪ್ಪಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.