ADVERTISEMENT

ಹದಗೆಟ್ಟಿದ್ದ ರಸ್ತೆಗಳ ಅಭಿವೃದ್ಧಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:56 IST
Last Updated 9 ಮಾರ್ಚ್ 2024, 14:56 IST
ಕುಶಾಲನಗರ ವ್ಯಾಪ್ತಿಯಲ್ಲಿ ₹ 40 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆಗಳ ಅಭಿವೃದ್ಧಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು
ಕುಶಾಲನಗರ ವ್ಯಾಪ್ತಿಯಲ್ಲಿ ₹ 40 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆಗಳ ಅಭಿವೃದ್ಧಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು   

ಕುಶಾಲನಗರ: ‘ತಾಲ್ಲೂಕು ಕೇಂದ್ರ ಪಟ್ಟಣ ವ್ಯಾಪ್ತಿಯಲ್ಲಿ ತೀವ್ರ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ರಥಮ ಹಂತದಲ್ಲಿ ₹ 40 ಲಕ್ಷ ವೆಚ್ಚದಲ್ಲಿ ನಾಲ್ಕು ಬಡಾವಣೆಗಳ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

‘2022-23 ರಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದ ಹಾನಿಯಾಗಿರುವ ಕುಶಾಲನಗರ 15ನೇ‌ ವಾರ್ಡಿನ ಆರ್ಯುವೇದಿಕ್ ವೈದ್ಯರ ಮನೆ ವರೆಗಿನ ರಸ್ತೆಗೆ ₹ 10 ಲಕ್ಷ, ಗೊಂದಿಬಸವನಹಳ್ಳಿ ಸುಬ್ರಮಣ್ಯ ಕಾಫಿ ಕ್ಯೂರಿಂಗ್ ವರ್ಕ್ ವರೆಗಿನ ರಸ್ತೆ ಅಭಿವೃದ್ಧಿಗೆ ₹ 10 ಲಕ್ಷ, ಬಸವೇಶ್ವರ ಬಡಾವಣೆ ಮೂರನೇ ವಾರ್ಡ್ ನವೀನ್ ಅವರ ಮನೆಯಿಂದ‌ ಪಾಲಾಕ್ಷ ಅವರ ಮನೆವರೆಗೆ ₹ 10 ಲಕ್ಷ ಹಾಗೂ ಮಾರುಕಟ್ಟೆ ಬಳಿಯ ನಾಗದೇವರ ಕಟ್ಟೆವರೆಗೆ ಮತ್ತು ಕೆಂಪಮ್ಮ ಬಡಾವಣೆ ರಸ್ತೆಗೆ ₹ 10 ಲಕ್ಷ ಸೇರಿದಂತೆ ಒಟ್ಟು ₹ 40 ಲಕ್ಷ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಲಾದ ಗ್ರಾಮೀಣ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ,ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಕಟ್ಟಡಗಳು ಹಾಗೂ ಕೆರೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ, ಪ್ರಕೃತಿ ವಿಕೋಪ ನಿಧಿಯಡಿ ಸಂಗ್ರಹವಾದ ಅನುದಾನದಡಿ ಮಡಿಕೇರಿ ಕ್ಷೇತ್ರಕ್ಕೆ ₹ 70 ಕೋಟಿ ಹಂಚಿಕೆ ಮಾಡಿದ್ದು, 69 ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್‌ ಸಂಸ್ಥೆ ಮೂಲಕ ಅನುಷ್ಠಾನ ಮಾಡುವಂತೆ ಅನುಮೋದನೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

ಈ ಸಂದರ್ಭ ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ದಿನೇಶ್, ಖಲಿಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಅಕ್ರಮ ಸಕ್ರಮ ಸಮಿತಿ ಗೋವಿಂದಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಮಣಿ, ನಾಗರಾಜು, ಗೊಂದಿಬಸವನಹಳ್ಳಿ ಜಗದೀಶ್, ಮುಳ್ಳುಸೋಗೆ ಹರೀಶ್, ಕೂಡಿಗೆ ಟಿ.ಪಿ.ಹಮೀದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.