ADVERTISEMENT

ಇಂಡೊನೇಷ್ಯಾದಲ್ಲಿ ಭೂಕಂಪ: ಗಾಳಿಬೀಡಿನಲ್ಲಿ ದಾಖಲು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 13:57 IST
Last Updated 2 ಅಕ್ಟೋಬರ್ 2018, 13:57 IST
   

ಮಡಿಕೇರಿ: ತಾಲ್ಲೂಕಿನ ಗಾಳಿಬೀಡು ನವೋದಯ ಶಾಲೆಯಲ್ಲಿ ಅಳವಡಿಸಿರುವ ರಿಕ್ಟರ್‌ ಮಾಪಕದಲ್ಲಿ ಇಂಡೊನೇಷ್ಯಾದಲ್ಲಿ ಸೆ. 28ರಂದು ಸಂಭವಿಸಿದ್ದ ಭೂಕಂಪದ ತೀವ್ರತೆ ದಾಖಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಉಂಟಾಗಿದ್ದ ಭೂಕುಸಿತದ ಬಳಿಕ ಈಶಾಲೆಯಲ್ಲಿ ರಿಕ್ಟರ್‌ ಮಾಪಕ ಅಳವಡಿಸಲಾಗಿತ್ತು. ಇಂಡೊನೇಷ್ಯಾದಲ್ಲಿ 7.5ರಷ್ಟು ತೀವ್ರತೆಯ ಭೂಕಂಪನವಾಗಿದೆ ಎಂಬ ಮಾಹಿತಿಯನ್ನು ಅಂದೇ ಹೈದರಾಬಾದ್‌ನ ಕೇಂದ್ರಕ್ಕೆ ರವಾನಿಸಿದೆ.

ಇಂಡೊನೇಷ್ಯಾದ ಸುವಾಲೆಸಿ ದ್ವೀಪದ ಪಲು ನಗರದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿತ್ತು. ಭೂಮಿಯ 10 ಕಿ.ಮೀ. ಆಳದಲ್ಲಿ ಉಂಟಾಗಿದ್ದ ಭೂಕಂಪದ ತೀವ್ರತೆಯನ್ನೂ ಈ ಮಾಪನ ಪತ್ತೆ ಹಚ್ಚಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ADVERTISEMENT

‘ಜಿಲ್ಲಾಡಳಿತದ ಮನವಿ ಮೇರೆಗೆ ನವೋದಯ ಶಾಲೆಯಲ್ಲಿ 5ಕ್ಕಿಂತ ಹೆಚ್ಚಿನ ತೀವ್ರತೆ ಅಳೆಯುವ ಮಾಪನ ಅಳವಡಿಸಲಾಗಿದ್ದು, ಅಮೆರಿಕದಿಂದ ಆಮದು ಮಾಡಿಕೊಂಡಿರುವ ಅತ್ಯಾಧುನಿಕ ಮಾಪನ ಇದಾಗಿದೆ’ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಹಾರಂಗಿ ಜಲಾಶಯದ ಆವರಣದಲ್ಲಿ ರಿಕ್ಟರ್‌ ಮಾಪನವಿತ್ತು. ಆದರೆ, ಜುಲೈನಲ್ಲಿ ಜಿಲ್ಲೆಯ ಕೆಲವು ಭಾಗದ ಜನರಿಗೆ ಭೂಕಂಪನದ ಅನುಭವವಾಗಿದ್ದರೂ ಹಾರಂಗಿಯಲ್ಲಿ ಯಾವುದೇ ತೀವ್ರತೆ ದಾಖಲಾಗಿರಲಿಲ್ಲ. ಬಳಿಕ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿ ಜೀವಹಾನಿ, ಮನೆ, ತೋಟಗಳು ನಾಶವಾಗಿದ್ದವು.

ಮಳೆಯ ತೀವ್ರತೆಯ ನಡುವೆ ರಾತ್ರೋರಾತ್ರಿ ಮತ್ತೆ ಭೂಕಂಪನ ಸಂಭವಿಸಿದೆ ಎಂದೇ ಜಿಲ್ಲೆಯ ಜನರು ಭಾವಿಸಿದ್ದರು. ಆದರೆ, ಭೂಗರ್ಭ ಶಾಸ್ತ್ರಜ್ಞರು ಕೊಡಗಿನಲ್ಲಿ ಆಗಸ್ಟ್‌ನಲ್ಲಿ ಭೂಕಂಪನ ಆಗಿಲ್ಲ ಎಂದು ಸ್ಪಷ್ಟಪಡಿಸಿ, ಜಿಲ್ಲಾಡಳಿತಕ್ಕೆ ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.