ಶನಿವಾರಸಂತೆ: ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ಕೃಷಿಕ ಶೇಷಪ್ಪ ಪೂಜಾರಿ ಕುಟುಂಬಸ್ಥರು ಮನೆಯಂಗಳದ ನಿಸರ್ಗದಲ್ಲಿ ಮರದಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಸಾಂಪ್ರದಾಯಿಕವಾಗಿ ಪೂಜಿಸಿ, ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಿದರು.
ಅಂದು ಬಾಲಗಂಗಾಧರ್ ತಿಲಕರು ದೇಶ ಸ್ವಾತಂತ್ರ್ಯಕ್ಕೆ ಜನರನ್ನು ಒಗ್ಗೂಡಿಸಲು ಗಣೇಶೋತ್ಸವ ಆಚರಿಸಿದ್ದರು. ಆದರಿಂದು ಕೊರೊನಾ ಅಬ್ಬರದಿಂದ ಸಂಘಟಿತರಾಗಿ ಹಬ್ಬವನ್ನು ಆಚರಿಸುವುದರಿಂದಲೇ ಅಪಾಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡ ಶೇಷಪ್ಪ ಪೂಜಾರಿ ಅವರ ಪುತ್ರ ಶಿಕ್ಷಕ ಸಿ.ಎಸ್.ಸತೀಶ್ ಹಬ್ಬದ ಆಚರಣೆಗಾಗಿ ತಾವೇ ಮನೆಯಲ್ಲಿದ್ದ ನಿರುಪಯುಕ್ತ ವಸ್ತುಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಿಸಿದರು.
‘ಪೇಪರ್, ರಟ್ಟು, ಪಾಲಿಶ್ ತೌಡು ಹಾಗೂ ಮೈದಾ ಅಂಟು ಬಳಸಿ 3 ಅಡಿ ಎತ್ತರದ ಸುಂದರ ಗಣಪತಿ ಮೂರ್ತಿ ನಿರ್ಮಿಸಿದರು. ‘ರಾಸಾಯನಿಕ ಮಿಶ್ರಣವಿಲ್ಲದ ಈ ಗಣೇಶ ಮೂರ್ತಿಯನ್ನು ಕೊಳದ ನೀರಲ್ಲಿ ವಿಸರ್ಜಿಸಿದರೆ ವಾರದಲ್ಲಿ ಕರಗುತ್ತದೆ. ಪಾಲಿಶ್ ತೌಡು ಜಲಚರಗಳಿಗೆ ಆಹಾರವಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಸತೀಶ್.
ಶೇಷಪ್ಪ ಪೂಜಾರಿ ಕುಟುಂಬಸ್ಥರು ಅಂತೂ ಖರ್ಚು ಇಲ್ಲದೇ, ಮನೆಯಂಗಳದ ಮನೆ ಮಂದಿಯಷ್ಟೇ ಗಣೇಶ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.