ADVERTISEMENT

ಕೊಡಗು ಜಿಲ್ಲೆಯಾದ್ಯಂತ ಈದ್‌ ಸಂಭ್ರಮ

ಮಡಿಕೇರಿಯಲ್ಲಿ ಮಹಾದೇವಪೇಟೆಯಿಂದ ಹಳೆಯ ಖಾಸಗಿ ಬಸ್‌ ನಿಲ್ದಾಣದ ತನಕ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 12:57 IST
Last Updated 11 ನವೆಂಬರ್ 2019, 12:57 IST
ಈದ್‌ ಮಿಲಾದ್‌ ಅಂಗವಾಗಿ ಮಡಿಕೇರಿಯಲ್ಲಿ ಸೋಮವಾರ ಮುಸ್ಲಿಮರು ಮೆರವಣಿಗೆ ನಡೆಸಿದರು
ಈದ್‌ ಮಿಲಾದ್‌ ಅಂಗವಾಗಿ ಮಡಿಕೇರಿಯಲ್ಲಿ ಸೋಮವಾರ ಮುಸ್ಲಿಮರು ಮೆರವಣಿಗೆ ನಡೆಸಿದರು   

ಮಡಿಕೇರಿ: ನಗರವೂ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಸೋಮವಾರ ಈದ್ ಮಿಲಾದ್‌ ಅನ್ನು ಮುಸ್ಲಿಮರು ಸಂಭ್ರಮ, ಸಡಗರದಿಂದ ಆಚರಿಸಿದರು. ಜಿಲ್ಲೆಯ ಕೆಲವು ಭಾಗದಲ್ಲಿ ಭಾನುವಾರವೇ ಆಚರಣೆ ನಡೆದಿದ್ದರೆ ಮಡಿಕೇರಿ, ಸಿದ್ದಾಪುರ, ವಿರಾಜಪೇಟೆ, ಕುಶಾಲನಗರಲ್ಲಿ ಹಬ್ಬವನ್ನು ಸೋಮವಾರ ಶ್ರದ್ಧಾ– ಭಕ್ತಿಯಿಂದ ಆಚರಣೆ ಮಾಡಲಾಯಿತು.

ಮಡಿಕೇರಿಯಲ್ಲಿ ಬೆಳಿಗ್ಗೆ 9ರ ಸುಮಾರಿಗೆ ಮಹಾದೇವಪೇಟೆಯಿಂದ ಆರಂಭವಾದ ಮೆರವಣಿಗೆಯು, ಹಳೆಯ ಖಾಸಗಿ ಬಸ್‌ ನಿಲ್ದಾಣದ ತನಕ ಸಾಗಿ ಅಲ್ಲಿಂದ ಮತ್ತೆ ಮಾರುಕಟ್ಟೆ ಪ್ರದೇಶಕ್ಕೆ ವಾಪಸ್ಸಾಯಿತು. ಮೆರವಣಿಗೆಯಲ್ಲಿ ನೂರಾರು ಮುಸ್ಲಿಮರು ಪಾಲ್ಗೊಂಡಿದ್ದು ವಿಶೇಷ. ಸಮಾಜದ ಹಿರಿಯರು, ಯುವಕರು ಹಾಗೂ ಪುಟ್ಟ ಮಕ್ಕಳು ಮೆರವಣಿಗೆಯಲ್ಲಿ ಸಾಗಿ ಬಂದರು. ವಿವಿಧ ಮದರಸಾಗಳ ವಿದ್ಯಾರ್ಥಿಗಳೂ ಬ್ಯಾನರ್ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪುಟ್ಟ ಮಕ್ಕಳು ಹೊಸಬಟ್ಟೆ ತೊಟ್ಟು ಹಬ್ಬಕ್ಕೆ ಕಳೆತಂದರು.

ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು ಇದ್ದವು. ಬಾವುಟಗಳು ಹಾರಾಡಿದವು. ಇಂದಿರಾ ಗಾಂಧಿ ವೃತ್ತದಲ್ಲಿ ಬೃಹತ್ ಬಾವುಟ ಕಟ್ಟಲಾಗಿತ್ತು. ಧ್ವನಿವರ್ಧಗಳಲ್ಲಿ ಘಜಲ್‌ ಗಾಯನ ಗಮನ ಸೆಳೆಯಿತು. ಮಕ್ಕಳು ತಾಳಕ್ಕೆ ಹೆಜ್ಜೆ ಹಾಕಿದರು. ಇಂದಿರಾ ಗಾಂಧಿ ವೃತ್ತದಲ್ಲಿ ಕೆಲವು ನಿಮಿಷ ಪ್ರದರ್ಶನ ನೀಡಲಾಯಿತು.

ADVERTISEMENT

ಸಮಾಜದ ಮುಖಂಡರು ಮೆರವಣಿಗೆಯ ನೇತೃತ್ವದ ವಹಿಸಿದ್ದರು. ಬಳಿಕ ಮಹಾದೇವಪೇಟೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ನಗರಸಭೆ ಮಾಜಿ ಸದಸ್ಯರಾದ ಅಮೀನ್‌ ಮೊಹಿಸಿನ್‌ ಮತ್ತಿತರರು ಹಾಜರಿದ್ದರು. ಶಾಂತಿ ಸೌಹಾರ್ದದಿಂದ ಬದುಕಬೇಕು ಎಂದು ಗಣ್ಯರು ಕರೆ ನೀಡಿದರು. ನಂತರ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪೊಲೀಸ್ ಭದ್ರತೆ: ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್‌ ಭದ್ರತೆ ಕಂಡುಬಂತು. ಆಯಕಟ್ಟಿನ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.