ADVERTISEMENT

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ: ಮಕ್ಕಳ ಕಡ್ಡಾಯ ಶಿಕ್ಷಣಕ್ಕೆ ಸಲಹೆ

ಕಾಡಂಚಿನ ಗ್ರಾಮದಲ್ಲಿ ಜಾಥಾ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:34 IST
Last Updated 15 ಜೂನ್ 2022, 4:34 IST
ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆಯ ತುಂಡುಮುಂಡಗೆಕೊಲ್ಲಿಯ ಗದ್ದೆಹಾಡಿಯಲ್ಲಿ ಮಂಗಳವಾರ ನಡೆದ ಬಾಲಕಾರ್ಮಿಕರ ವಿರೋಧಿ ದಿನದಲ್ಲಿ ಮಕ್ಕಳು ಜಾಥಾ ನಡೆಸಿದರು
ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆಯ ತುಂಡುಮುಂಡಗೆಕೊಲ್ಲಿಯ ಗದ್ದೆಹಾಡಿಯಲ್ಲಿ ಮಂಗಳವಾರ ನಡೆದ ಬಾಲಕಾರ್ಮಿಕರ ವಿರೋಧಿ ದಿನದಲ್ಲಿ ಮಕ್ಕಳು ಜಾಥಾ ನಡೆಸಿದರು   

ಗೋಣಿಕೊಪ್ಪಲು: ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಮಂಗಳವಾರ ಜಿಲ್ಲಾಡಳಿತ ಇಲ್ಲಿನ ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆಯ ತುಂಡುಮುಂಡಗೆ ಕೊಲ್ಲಿಯ ಗದ್ದೆಹಾಡಿಯಲ್ಲಿ ಏರ್ಪಡಿಸಿದ್ದ ಜಾಥಾದಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.

ನಾಗರಹೊಳೆಯಲ್ಲಿನ ಗಿರಿಜನ ಆಶ್ರಯ ಶಾಲೆಯ ಆವರಣದಿಂದ ಜಾಥಾ ಆರಂಭಗೊಂಡು ಹಾಡಿಯ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ದಾರಿಯುದ್ದಧಕ್ಕೂ ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸುವ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ಘೋಷವಾಕ್ಯಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಹಾಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ನಂತರ, ತುಂಡುಮುಂಡಗೆಕೊಲ್ಲಿ ಗದ್ದೆಹಾಡಿಯ ಆವರಣದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ವಿರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ ಕೊಠಾರಿ ಉದ್ಘಾಟಿಸಿದರು.

ADVERTISEMENT

‘ಮಕ್ಕಳಿಗೆ ಶಾಲಾ ಶಿಕ್ಷಣ ಒದಗಿಸುವುದು ಪ್ರತಿ ನಾಗರಿಕರ ಕರ್ತವ್ಯ ಹಾಗೂ ಬಾಲಕಾರ್ಮಿಕ ಪದ್ಧತಿಯನ್ನು ಪ್ರತಿಯೊಬ್ಬರೂ ವಿರೋಧಿಸುವ ಮೂಲಕ ಜವಾಬ್ದಾರಿಯುತ ನಾಗರಿಕ ರಾಗಬೇಕು’ ಎಂದು ಹೇಳಿದರು.

ಕಾರ್ಮಿಕ ಇಲಾಖೆ ಅಧಿಕಾರಿ ಅನಿಲ್ ಬಿ.ಬಗಟಿ ಮಾತನಾಡಿ, ‘ಹಾಡಿ ಜನರು ತಮ್ಮ ಮಕ್ಕಳನ್ನು ಯಾವುದೇ ಕೆಲಸಗಳಿಗೆ ಕಳುಹಿಸದೆ ಕಡ್ಡಾಯವಾಗಿ ಶಾಲೆಗಳಿಗೆ ಕಳುಹಿಸಬೇಕು’ ಎಂದು ಕಿವಿಮಾತು ಹೇಳಿದರು.

ವಿಶೇಷ ಮಕ್ಕಳ ಪೊಲೀಸ್ ಘಟಕದ ಸುಮತಿ ಮಾತನಾಡಿ, ‘ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಬಾರದು. ಮಕ್ಕಳು ಶಿಕ್ಷಣದಿಂದ ಹೊರಗುಳಿದರೆ ಸಮಾಜದ ಮೇಲೆ ದುಷ್ಪರಿಣಾಮವಾಗುತ್ತದೆ. ಇದರಿಂದ ಮಕ್ಕಳು ಬಾಲಕಾರ್ಮಿಕರಾಗಿ, ಬಾಲ್ಯ ವಿವಾಹ, ಮಕ್ಕಳ ಮೇಲೆ ದೌರ್ಜನ್ಯ, ಮಕ್ಕಳ ಸಾಗಾಣಿಕೆಗೆ ತುತ್ತಾಗುವ ಸಾಧ್ಯತೆ ಗಳು ಇವೆ’ ಎಂದು ಎಚ್ಚರಿಕೆ ನೀಡಿದರು.

ಸ್ತ್ರೀಶಕ್ತಿ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷೆ ರೆಹಾನಾ ಸುಲ್ತಾನ್ ಮಾತನಾಡಿ, ‘14 ವರ್ಷದ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರು ವುದು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಕೋರಿದರು.

ಜಿಲ್ಲಾಡಳಿತದ ಜತೆಗೆ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಿರಾಜಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಚೈಲ್ಡ್‌ಲೈನ್-1098, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಸಂಘಟನೆಗಳು ಸಹಯೋಗ ನೀಡಿದ್ದವು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯು, ನಾಗರಹೊಳೆ ಅರಣ್ಯ ಹಕ್ಕು ಸಮಿತಿ ಹಾಗೂ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಶಿವು ಜೆ.ಎ.ಕರಡಿಕಲ್ಲು, ನಾಗರಹೊಳೆ ರಾಜ್ಯ ಮೂಲ ನಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ.ತಿಮ್ಮ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎನ್.ಮಂಜುನಾಥ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಆರ್.ಸಿರಾಜ್ ಅಹ್ಮದ್, ನಾಲ್ಕೇರಿ ಗ್ರಾ.ಪಂ.ಅಧ್ಯಕ್ಷೆ ಎಚ್.ಆರ್.ಮೀನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.