ADVERTISEMENT

ಕಾಡಾನೆ ದಾಳಿ: ಕಾರ್ಮಿಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 13:11 IST
Last Updated 17 ಏಪ್ರಿಲ್ 2019, 13:11 IST
ಗಾಯಾಳು ಪಂಜಿರಿ ಎರವರ ಮಾರಾ ಅವರ ಚಿಕಿತ್ಸೆಗೆ ನೆರವು ಹಸ್ತಾಂತರ ಮಾಡಲಾಯಿತು
ಗಾಯಾಳು ಪಂಜಿರಿ ಎರವರ ಮಾರಾ ಅವರ ಚಿಕಿತ್ಸೆಗೆ ನೆರವು ಹಸ್ತಾಂತರ ಮಾಡಲಾಯಿತು   

ಪೊನ್ನಂಪೇಟೆ: ಕಾಡಾನೆ ದಾಳಿಗೆ ತೋಟದ ಕಾರ್ಮಿಕರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಕುರ್ಚಿ ಗ್ರಾಮದಲ್ಲಿ ನಡೆದಿದೆ.

ಪಂಜಿರಿ ಎರವರ ಮಾರಾ (65) ಗಾಯಗೊಂಡವರು. ಆನೆ ದಾಳಿಯಿಂದ ಕಾಲು ಹಾಗೂ ಕೈಗೆ ಗಾಯವಾಗಿದೆ. ಶ್ರೀಮಂಗಲ ಕರುಣಾ ಟ್ರಸ್ಟ್ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕುರ್ಚಿ ಗ್ರಾಮದ ಅಜ್ಜಮಾಡ ಸುಬ್ರಮಣಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿ ನಡೆದಿದ್ದು, ಎಡಗಾಲಿನ ತೊಡೆಯ ಭಾಗ ಸಂಪೂರ್ಣ ಸೀಳಿದೆ. ಎಡಗೈ ಕೂಡ ತಿವಿತಕ್ಕೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಶ್ರೀಮಂಗಲ ಕರುಣಾ ಟ್ರಸ್ಟ್ ಆರೋಗ್ಯ ಕೇಂದ್ರದಲ್ಲಿ ಡಾ.ಗೌತಂ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟರು. ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಅಧಿಕಾರಿ ವೀರೇಂದ್ರ ಭೇಟಿ ನೀಡಿ ಪರಿಶೀಲಿಸಿದರು.

ದಾಳಿ ವಿಚಾರ ತಿಳಿಯುತ್ತಿದ್ದಂತೆ ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹಾಗೂ ಮುಖಂಡರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆ ಕಾರ್ಯ ವೈಖರಿ ಖಂಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ಅರಣ್ಯ ಇಲಾಖೆಯಿಂದ ಚಿಕಿತ್ಸೆಗೆ ₹ 10 ಸಾವಿರ ನೆರವು ನೀಡಲಾಯಿತು.

ಒತ್ತಾಯ: ಕುರ್ಚಿ ಭಾಗದಲ್ಲಿ ಕಾಡಾನೆ ಬಗ್ಗೆ ನಿಗಾ ವಹಿಸಲು ಅರಣ್ಯ ಇಲಾಖೆ ನೇಮಿಸಿರುವ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದೇ ದಾಳಿಗೆ ಪ್ರಮುಖ ಕಾರಣ ಎಂದು ರೈತ ಸಂಘ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಆರೋಪಿಸಿದರು. ರೈತ ಮುಖಂಡರಾದ ಅಯ್ಯಮಾಡ ಹ್ಯಾರಿ ಸೋಮೇಶ್, ಮಚ್ಚಮಾಡ ರಂಜಿ, ಚಂಗುಲಂಡ ರಾಜಪ್ಪ, ಶ್ರೀಮಂಗಲ ಗ್ರಾ.ಪಂ. ಸದಸ್ಯ ಅಜ್ಜಮಾಡ ಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.