ನಾಪೋಕ್ಲು: ಸಮೀಪದ ನರಿಯಂದಡ, ಯವಕಪಾಡಿ, ಕಕ್ಕಬ್ಬೆ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಭಾಗದ ಕೃಷಿ ಫಸಲು ನಿರಂತರವಾಗಿ ಹಾನಿಗೊಳಗಾಗುತ್ತಿದ್ದು ರೈತರು ಆತಂಕಗೊಂಡಿದ್ದಾರೆ.
ಬುಧವಾರ ರಾತ್ರಿ ಕಾಡಾನೆಯೊಂದು ಸಮೀಪದ ಪಾಡಿಇಗ್ಗುತ್ತಪ್ಪ ದೇವಾಲಯದ ಬಳಿ ಅಡ್ಡಾಡುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಮನೆ ಆಸ್ತಿ ನಾಶವಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳಿಗೆ ಹಾನಿಯಾಗಿದೆ.
ಇಲ್ಲಿ ಒಂಟಿ ಸಲಗ ಓಡಾಡುತ್ತಿದ್ದು ಪ್ರತಿವರ್ಷ ಸಮಸ್ಯೆ ಆಗುತ್ತಿದೆ. ಇದನ್ನು ಸೆರೆಹಿಡಿಯದೇ ಬೆಳೆಗಾರರಿಗೆ ನೆಮ್ಮದಿ ಇಲ್ಲ ಎಂದು ಮಡಿಕೇರಿ ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವಲತ್ತುಗೊಂಡರು.
ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಪಾರೆ, ಬಿಟಿಯಾಡಿ, ಮಡೆಕಾನ, ಫಾರೆಸ್ಟ್ ಐಬಿ, ಪಚ್ಚೆಪಿಲಾವ್ ಸೇರಿದಂತೆ ಹಲವು ಭಾಗಗಳಲ್ಲಿ ಆನೆ ಮತ್ತು ಮಾನವನ ನಡುವಿನ ಸಂಘರ್ಷದ ಬಗ್ಗೆ ಹಾಗೂ ಕಾಡು ಪ್ರಾಣಿಗಳಿಂದ ದಿನನಿತ್ಯ ಹೆಚ್ಚುತ್ತಿರುವ ಉಪಟಳದ ಬಗ್ಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಾರ್ವಜನಿಕರ ಸಭೆ ನಡೆಯಿತು.
ಆನೆಗಳು ಕಾಡಿನಿಂದ ಕೃಷಿ ಜಮೀನಿಗೆ ಬಂದು ರೈತರು ಬೆಳೆದ ತೆಂಗು, ಅಡಿಕೆ, ಬಾಳೆ ಫಸಲುಗಳನ್ನು ನಾಶಪಡಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದರು.
ಆನೆಗಳ ಉಪಟಳವನ್ನು ತಡೆಯಲು ಅರಣ್ಯದ ಅಂಚಿನಲ್ಲಿ ಆನೆ ಕಂದಕವನ್ನು ತೆಗೆಯುವುದರಿಂದ ಆನೆಗಳ ಹಾವಳಿಯನ್ನು ತಡೆಯಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ಬಾರಿ ಆನೆಪಾರೆ ಭಾಗದಲ್ಲಿ ಆನೆ ಕಂದಕಗಳನ್ನು ತೋಡಲಾಗಿದೆ. ಅರಣ್ಯ ಪ್ರವಾಸಿ ಮಂದಿರದಿಂದ ಕೇರಳದ ಗಡಿಯವರೆಗೂ, ಬಿಟಿಯಾಡಿ, ಮಡೆಕಾನ, ಕೊಳಂಗಾರೆ, ಅಂಬೇಡ್ಕರ್ ಕಾಲೊನಿ, ಪಚ್ಚೆಪಿಲಾವ್, ಆಲತ್ತಿಕಡವ್ ಮುಂತಾದ ಭಾಗಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿ ಇರುವುದರಿಂದ ಅಂತಹ ಸ್ಥಳಗಳಲ್ಲಿ ಆನೆ ಕಂದಕಗಳನ್ನು ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಅರಣ್ಯಾಧಿಕಾರಿಯವರಿಗೆ ಮಾಹಿತಿ ನೀಡಿದರು.
ಭಾಗಮಂಡಲ ವಲಯ ಅರಣ್ಯಾಧಿಕಾರಿ ರವೀಂದ್ರ, ವನ್ಯಜೀವಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ತಾಲ್ಲೂಕು ಕೆಡಿಪಿ ಸದಸ್ಯ ಜಯನ್, ಗ್ರಾಮ ಪಂಚಾಯಿತಿ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
‘ನಷ್ಟಕ್ಕೆ ಪರಿಹಾರ ನೀಡಿ’
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್ ನಾಯರ್ ಮಾತನಾಡಿ ಕಾಡಾನೆಗಳ ಉಪಟಳವನ್ನು ತಡೆಯುವ ಸಲುವಾಗಿ ಶೀಘ್ರವಾಗಿ ಆನೆ ಕಂದಕಗಳನ್ನು ನಿರ್ಮಿಸಬೇಕು. ಕಾಡು ಪ್ರಾಣಗಳಿಂದ ಫಸಲು ನಾಶವಾದ ಜಮೀನುಗಳಿಗೆ ತೆರಳಿ ಖುದ್ದಾಗಿ ಪರಿಶೀಲಿಸಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಮೊತ್ತವನ್ನು ನೀಡುವಂತೆ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.