ಕುಶಾಲನಗರ: ‘ಇಂಗ್ಲಿಷ್ ಭಾಷೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯವಾಗಿದೆ. ಕನ್ನಡ ಭಾಷೆ ಜತೆಗೆ ಇಂಗ್ಲಿಷ್ ಭಾಷೆಯನ್ನು ಪಾಠವಾಗಿ ಕಲಿಸಲು ಶಿಕ್ಷಕರು ವಿಶೇಷ ಒತ್ತು ಕೊಡಬೇಕು’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಸಮೀಪದ ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಒಂದನೇ ತರಗತಿ ಆರಂಭಕ್ಕೆ ಮಂಗಳವಾರ ಚಾಲನೆ ನೀಡಿ, ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ‘ಶಿಕ್ಷಣವು ಮನುಷ್ಯನ ಬದುಕಿನ ಅಡಿಪಾಯ. ವ್ಯಕ್ತಿತ್ವವನ್ನು ರೂಪಿಸುತ್ತದೆ. ಇಂಗ್ಲಿಷ್ ಮಾಧ್ಯಮ ವ್ಯವಹಾರಿಕೆ ಮತ್ತು ಔದ್ಯೋಗಿಕ ಕ್ಷೇತ್ರ ಸೇರಿದಂತೆ ಅನಿವಾರ್ಯವಾಗಿ ಆಂಗ್ಲ ಮಾಧ್ಯಮದ ಅಗತ್ಯ ಇದೆ’ ಎಂದರು.
ಡಿಡಿಪಿಐ ಸಿ.ರಂಗಧಾಮಪ್ಪ, ಸರ್ಕಾರದ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 47 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಒಂದನೇ ತರಗತಿ ಆರಂಭಿಸಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ ಮಾತನಾಡಿ, ‘ತಾಲ್ಲೂಕಿನಲ್ಲಿ 17 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಲ್ ಕೆ.ಜಿ. ಯಲ್ಲಿ 112 ಮಕ್ಕಳು, ಯು.ಕೆ.ಜಿ.ಯಲ್ಲಿ 128 ಮಕ್ಕಳು ಮತ್ತು ಒಂದನೇ ತರಗತಿಯಲ್ಲಿ 212 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇಂಗ್ಲಿಷ್ ಮಾಧ್ಯಮ ಬೋಧಿಸುವ ಶಿಕ್ಷಕರಿಗೆ ಇಲಾಖೆಯ ವತಿಯಿಂದ ಉತ್ತಮ ತರಬೇತಿ ನೀಡಲಾಗುತ್ತಿದೆ’ ಎಂದರು.
ಶಾಲಾ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸಲಾಗುತ್ತಿದ್ದು, ಇದರಿಂದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಯಲು ಸುಲಭವಾಗುತ್ತದೆ’ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಎಚ್.ಜೆ.ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷ ಡಿ.
ಭಾಸ್ಕರ್ ನಾಯಕ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸೋಮಶೇಖರ್, ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಪಿಡಿಓ ಎಂ.ಆರ್.ಸಂತೋಷ್,ಸಿ ಆರ್ ಪಿ ಕೆ.ಶಾಂತಕುಮಾರ್, ಎಸ್.ಡಿ.ಎಂ.ಸಿ.ಸದಸ್ಯರು, ವಿವಿಧ ಶಾಲೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿ ಕೆ.ಶಾಂತಕುಮಾರ್ ನಿರ್ವಹಿಸಿದರು.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆಡಾ.ಮಂತರ್ ಗೌಡ ಶಾಸಕ
ಸಾಧನಾ ಸಲಕರಣೆಗಳ ವಿತರಣೆ
ಶಾಲಾ ಮಕ್ಕಳ ಜತೆ ಬೆರೆತು ಅವರ ಕಲಿಕೆ ಮತ್ತು ಆರೋಗ್ಯದ ಕುರಿತು ಕುಶಲೋಪರಿ ವಿಚಾರಿಸಿದ ಶಾಸಕರು ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಸಮನ್ವಯ ಶಿಕ್ಷಣ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳಿಗೆ ವೀಲ್ ಚೇರ್ ಸಹಾಯಕ ಸಾಧನಾ ಸಲಕರಣೆಗಳನ್ನು ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.