
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಬುಧವಾರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127ನೇ ಜನ್ಮ ದಿನವನ್ನು ಶಿಸ್ತುಬದ್ಧವಾಗಿ ಆಚರಿಸಲಾಯಿತು.
ಬೆಳಿಗ್ಗೆಯೇ ಇಲ್ಲಿನ ರೋಶನಾರ ಬಳಿಯಲ್ಲಿರುವ ಕಾರ್ಯಪ್ಪ ಅವರ ಸಮಾಧಿ ಸ್ಥಳಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ನಂತರ, ದೇಶಭಕ್ತಿ ಗೀತೆ ಹಾಡಲಾಯಿತು. ನಗರದಲ್ಲಿ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆ ವತಿಯಿಂದ ಇಲ್ಲಿನ ಕೊಡಗು ವಿದ್ಯಾಲಯದ ಸಭಾಂಗಣದಲ್ಲಿ, ಸೋಮವಾರಪೇಟೆಯ ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 127ನೇ ಜನ್ಮ ದಿನಾಚರಣೆ ಪ್ರಯುಕ್ತ ಬುಧವಾರ ಮಡಿಕೇರಿ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಹಲವು ಮಂದಿ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ.ಸಿ.ನಾಣಯ್ಯ, ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಮಂಗೇರಿರ ಮುತ್ತಣ್ಣ, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ ಸೇರಿದಂತೆ ಮಡಿಕೇರಿ ನಗರದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಜಿಲ್ಲಾಡಳಿತ ಸಂರಕ್ಷಿಸಬೇಕು’ ಎಂದು ಒತ್ತಾಯಿಸಿದರು.
‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಶಿಸ್ತು, ಸಮಯ ಪ್ರಜ್ಞೆ ಪ್ರತಿಯೊಬ್ಬರಿಗೂ ಮಾದರಿ. ಆ ನಿಟ್ಟಿನಲ್ಲಿ ರಾಷ್ಟ್ರದ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರನ್ನು ಸದಾ ಸ್ಮರಿಸಬೇಕು. ಅವರ ಜೀವನ ಚರಿತ್ರೆ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ಅವರು ಸೇನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯ’ ಎಂದರು.
ಸಾಹಿತಿ ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಕರ್ತವ್ಯ ನಿಷ್ಠೆ ಹಾಗೂ ಸಮಯ ಪಾಲನೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ನಿಮ್ಮ ಕೆಲಸವನ್ನು ಯಾರದರೂ ಗಮನಿಸುತ್ತಿರುವಾಗ ಮಾಡುವುದಕ್ಕಿಂತ ಯಾರೂ ಗಮನಿಸದೇ ಇದ್ದಾಗ ಹೆಚ್ಚು ಶ್ರಮವಹಿಸಿ ಉತ್ತಮವಾಗಿ ಕೆಲಸ ಮಾಡಿ. ಎಲ್ಲಾ ಸಮಯದಲ್ಲಿ ಸಮಯ ಪಾಲನೆಯನ್ನು ರೂಢಿಸಿಕೊಳ್ಳಿ ಎನ್ನುತ್ತಿದ್ದರು’ ಎಂದು ತಿಳಿಸಿದರು.
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ಸಂತ ಮೈಕಲರ ಗೈಡ್ಸ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸಿ.ಅನಿತಾ ನಿರೂಪಿಸಿ, ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮೊದಲು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪಥಸಂಚಲನ ಆರಂಭವಾಯಿತು.
ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಂದ ವಾದ್ಯವೃಂದ ನಡೆಯಿತು. ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಶಿಕ್ಷಕರು, ಮಾಜಿ ಸೈನಿಕರು ಪಾಲ್ಗೊಂಡಿದ್ದರು. ಎಫ್‍ಎಂಸಿ ಮತ್ತು ಜಿಟಿ ಪೌಂಡೇಷನ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.
ಪುಷ್ಪನಮನ ಸಲ್ಲಿಸಿದವರು
ಏರ್ ಮಾರ್ಷಲ್(ನಿವೃತ್ತ) ನಂದ ಕಾರ್ಯಪ್ಪ ಮಾಜಿ ಸಚಿವ ಎಂ.ಸಿ.ನಾಣಯ್ಯ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಹಶೀಲ್ದಾರ್ ಶ್ರೀಧರ ಡಿವೈಎಸ್‍ಪಿಗಳಾದ ಸೂರಜ್ ಮೇದಪ್ಪ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ಓಂಕಾರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಕಂಬೆಯಂಡ ಡೀನಾ ಬೋಜಣ್ಣ ಪಿ.ಕೆ.ಕುಟ್ಟಪ್ಪ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮುಖಂಡರಾದ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ನಾಪಂಡ ರವಿಕಾಳಪ್ಪ ಬಿ.ಎಸ್.ತಮ್ಮಯ್ಯ ಉಳ್ಳಿಯಡ ಎಂ.ಪೂವಯ್ಯ ನಗರಸಭೆ ಸದಸ್ಯರಾದ ಸತೀಶ್ ಅನಿತಾ ಪೂವಯ್ಯ ಸಬಿತಾ ಪೌರಾಯುಕ್ತ ಎಚ್.ಆರ್.ರಮೇಶ್ ಮಾಜಿ ಸೈನಿಕರ ಗೌರವ ಅಧ್ಯಕ್ಷ ಸೋಮಣ್ಣ ಪಾಲೆಂಗಡ ಅಮಿತ್ ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಟಿ.ಸುಬ್ಬಯ್ಯ ಬಿ.ಅಶ್ವಥ್ ವಿನು ಚೆಯ್ಯಂಡ ಸತ್ಯ ಸೂರಜ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸ್ವೀಕ್ವೇರಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಂಘಟಕರಾದ ದಮಯಂತಿ ಸುಲೋಚನಾ ಗಣೇಶ್ ಅವರೆಮಾದಂಡ ಶರಣ್ ಮಾಜಿ ಸೈನಿಕರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಅಭಿಮಾನಿಗಳು ಹೂಗುಚ್ಛ ಇಟ್ಟು ಪುಷ್ಪನಮನ ಸಲ್ಲಿಸಿದರು.
ಆಡಿಯೊ ಸಂದೇಶ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರ ಆಡಿಯೊ ಸಂದೇಶವನ್ನು ಕೇಳಿಸಲಾಯಿತು. ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ದೇಶಭಕ್ತಿ ರಾಷ್ಟ್ರಪ್ರೇಮವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅವರಲ್ಲಿದ್ದ ನಾಗರಿಕ ಪ್ರಜ್ಞೆ ಮೆಚ್ಚುವಂತದ್ದು. ಪ್ರತಿಯೊಬ್ಬರೂ ಶಿಸ್ತು ಮತ್ತು ಸಮಯ ಪ್ರಜ್ಞೆಯಿಂದ ಬದುಕು ನಡೆಸುವುದು ಹೇಗೆ ಎಂಬುದಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರೇ ಮಾದರಿ’ ಎಂದು ಅವರು ತಮ್ಮ ಆಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಶಾಸಕ ಡಾ.ಮಂತರ್ ಗೌಡ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಸಹ ಶುಭ ಸಂದೇಶ ಕಳುಹಿಸಿದ್ದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸೇನಾ ಕ್ಷೇತ್ರದಲ್ಲಿನ ಸೇವೆ ಯುವಜನರಿಗೆ ಮಾದರಿ. ಶಿಸ್ತು ಶ್ರದ್ಧೆ ಸಮಯ ಪ್ರಜ್ಞೆಗೆ ಹೆಸರಾಗಿದ್ದ ಅವರು ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು–ಆರ್.ಐಶ್ವರ್ಯ, ಹೆಚ್ಚುವರಿ ಜಿಲ್ಲಾಧಿಕಾರಿ.
‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಕೊಡಗು ಮಣ್ಣಿನಲ್ಲಿ ಹುಟ್ಟಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರು ಶಿಸ್ತಿನ ಸಿಪಾಯಿ ಆಗಿ ಭಾರತೀಯ ಸೇನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದರು–ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.