ADVERTISEMENT

150 ಯೋಗಾಸನ: 5ನೇ ತರಗತಿ ವಿದ್ಯಾರ್ಥಿನಿಯ ಮೂರು ದಾಖಲೆ!

ಕೊಡಗು ಜಿಲ್ಲೆಯ ಅಪರೂಪದ ಬಾಲ ಯೋಗಸಾಧಕಿ ಮದೆನಾಡಿನ ಸಿಂಚನಾ

ಕೆ.ಎಸ್.ಗಿರೀಶ್
Published 31 ಜುಲೈ 2024, 6:20 IST
Last Updated 31 ಜುಲೈ 2024, 6:20 IST
ಯೋಗಾಸನ ಮಾಡುವುದರಲ್ಲಿ ನಿರತಳಾದ ಸಿಂಚನಾ
ಯೋಗಾಸನ ಮಾಡುವುದರಲ್ಲಿ ನಿರತಳಾದ ಸಿಂಚನಾ   

ಮಡಿಕೇರಿ: ಓದುತ್ತಿರುವುದು 5ನೇ ತರಗತಿ, ಮಾಡುವುದು 150 ಯೋಗಾಸನಗಳು, ಮಾಡಿರುವುದು 3 ದಾಖಲೆ. ಗುರಿ ಇರುವುದು ಗಿನ್ನಿಸ್ ದಾಖಲೆ... ಹೀಗೆ ತಾಲ್ಲೂಕಿನ ಮದೆನಾಡಿನ ಕೀರ್ತಿಕುಮಾರ್ ಮತ್ತು ರೇಣುಕಾ ದಂಪತಿಯ ಪುತ್ರಿ ಬಿ.ಕೆ.ಸಿಂಚನಾ ಕುರಿತು ಹೇಳುತ್ತಾ ಹೋದರೆ ಆಕೆಯ ಸಾಧನೆ ಮುಗಿಯುವುದೇ ಇಲ್ಲ. ಅಲ್ಲಿನ ಬಿಜಿಎಸ್‌ ಪಬ್ಲಿಕ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ ಈ ಬಾಲಕಿ ಈಗಲೇ ಹುಬ್ಬೇರುವಷ್ಟು ಸಾಧನೆ ಮಾಡಿದ್ದು, ಎಲ್ಲರ ಗಮನ ಸೆಳೆದಿದ್ದಾಳೆ.

ಇದಕ್ಕೆ ಕಿರೀಟವಿಟ್ಟಂತೆ ಈಚೆಗೆ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌’ನಲ್ಲಿ ದೇಹದ ಅರ್ಧಭಾಗವನ್ನು ಹಿಂದಕ್ಕೆ ಬಾಗಿಸಿ ಕಾಲು ಹಿಡಿದು ಮುಂದಕ್ಕೆ ಚಲಿಸುವ ಡಿಂಬಾಸನದ ಭಂಗಿಯಲ್ಲಿ 1 ನಿಮಿಷಕ್ಕೆ 10 ಮೀಟರ್‌ ದೂರ ಚಲಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ್ದಾಳೆ.

ಅಂದ ಹಾಗೆ, ಈಕೆಯ ಗುರು ಸ್ವತಃ ತಾಯಿ ರೇಣುಕಾ. ಮದೆನಾಡಿನಂತಹ ಗ್ರಾಮದಲ್ಲಿದ್ದರೂ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಮಗಳಿಗೆ 5 ವರ್ಷ ಇರುವಾಗಿನಿಂದಲೇ ಇವರು ಯೋಗ ತರಬೇತಿ ನೀಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಕಲಾತ್ಮಕ ಯೋಗವನ್ನೂ ಅಭ್ಯಾಸ ಮಾಡುತ್ತಿರುವ ಸಿಂಚನಾ ಸದ್ಯ, 1 ನಿಮಿಷಕ್ಕೆ 40ರಿಂದ 50 ಯೋಗಾಸನಗಳನ್ನು ಕಣ್ಣೆವೆ ಬಡಿಯುವಷ್ಟರಲ್ಲಿ ಮಾಡುತ್ತಿರುವುದು ವಿಶೇಷ.

ADVERTISEMENT

ಈಕೆ ಮಾಡುವ 150 ಯೋಗಾಸನಗಳಲ್ಲಿ 50 ಕಠಿಣ ಆಸನಗಳು. ಹಾಗಾಗಿ, ಸಿಂಚನಾ ‘ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್’ನಲ್ಲಿ ‘ಸಣ್ಣ ವಯಸ್ಸಿನಲ್ಲಿ ಕಠಿಣ ಆಸನಗಳನ್ನು ಮಾಡುವ ಬಾಲಕಿ’ ಎಂಬ ದಾಖಲೆ ನಿರ್ಮಿಸಿದ್ದಾಳೆ.

ಇದರ ಜತೆಗೆ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದೇಹವನ್ನು ಸಮತೋಲನದಲ್ಲಿಟ್ಟುಕೊಂಡು ಚಕ್ರಾಸನದಲ್ಲಿ ಕಾಲುಗಳನ್ನು ತಿರುಗಿಸುವಿಕೆಯಲ್ಲಿ 1 ನಿಮಿಷಕ್ಕೆ 11 ಬಾರಿ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಈಗ ಅದನ್ನು ಉತ್ತಮಪಡಿಸಿಕೊಂಡು 1 ನಿಮಿಷಕ್ಕೆ 30ಕ್ಕೂ ಅಧಿಕ ಬಾರಿ ಈ ಆಸನವನ್ನು ಮಾಡುತ್ತಾಳೆ.

ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ, ಬೆಳಗಾವಿ ಸಂಸ್ಥೆಯು ‘ರಾಷ್ಟ್ರೀಯ ಯೋಗಭಾರತೀ’ ಪ್ರಶಸ್ತಿ ನೀಡಿ ಗೌರವಿಸಿದೆ ಮಾತ್ರವಲ್ಲ ‘ಅತ್ಯದ್ಭುತ ಯೋಗ ಪ್ರತಿಭೆ’ ಎಂದೂ ಶ್ಲಾಘಿಸಿದೆ.

ಇಷ್ಟೇ ಅಲ್ಲ, ದೇವರಕೊಲ್ಲಿಯ ಚಾಮುಂಡೇಶ್ವರಿ ದೇಗುಲದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಕಲಾತ್ಮಕ ಯೋಗವನ್ನು ಪ್ರದರ್ಶಿಸಿದ್ದಾಳೆ. ಬಿಜಿಎಸ್‌ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ, ಶಿಕ್ಷಕರ ದಿನಾಚರಣೆ, ಪೋಷಕರ ಕ್ರೀಡಾಕೂಟದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದ್ದಾಳೆ. ಮದೆನಾಡು ಮಹಿಳಾ ಸಂಘದವರು ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಹಾಗೂ ಜಿಲ್ಲಾಡಳಿತ ಮಡಿಕೇರಿಯಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಕಲಾತ್ಮಕ ಯೋಗ ಪ್ರದರ್ಶಿಸಿದ್ದು ಮಾತ್ರವಲ್ಲ ನವದೆಹಲಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಘಟಿಕೋತ್ಸವದಲ್ಲೂ ಯೋಗ ಪ್ರದರ್ಶಿಸುವ ಮೂಲಕ ಜಿಲ್ಲೆಯ ಅಪರೂಪದ ಯೋಗ ಪ್ರತಿಭೆ ಎಂಬ ಕೀರ್ತಿಗೆ ಭಾಜನಳಾಗಿದ್ದಾಳೆ.

ತಾಯಿ ರೇಣುಕಾ ಪ್ರತಿಕ್ರಿಯಿಸಿ, ‘ಮಗಳಿಗೆ ಗಿನ್ನಿಸ್ ದಾಖಲೆ ನಿರ್ಮಿಸಬೇಕು ಎನ್ನುವ ಹಂಬಲ ಇದೆ. ಆಕೆಗೆ ಆ ಸಾಮರ್ಥ್ಯವೂ ಇದೆ. ಆದರೆ, ಸಮಾಜದ ಅನುಭವಿಗಳ ಪ್ರೋತ್ಸಾಹದ ಅಗತ್ಯ ಇದೆ’ ಎಂದು ಹೇಳಿದರು.

ಪತಿ ಕೀರ್ತಿಕುಮಾರ್, ಮದೆನಾಡಿನ ಗ್ರಾಮಸ್ಥರು, ಬಿಜಿಎಸ್‌ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಹಿರಿಯ ಯೋಗ ಶಿಕ್ಷಕ ಮಹೇಶ್, ಜೋಯಪ್ಪ ಮಾಸ್ತರ್, ಚಿತ್ರಾ ಸುಜನ್ ಸೇರಿದಂತೆ ಹಲವು ಮಂದಿ ನನ್ನ ಮಗಳಿಗೆ ಈಗಾಗಲೇ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು.

ಸಾಧಕಿ ಸಿಂಚನಾ ಪ್ರತಿಕ್ರಿಯಿಸಿ, ‘ನಾನು 5 ವರ್ಷದಿಂದ ಯೋಗಾಭ್ಯಾಸವನ್ನು ನಿತ್ಯವೂ ಮಾಡುತ್ತಿದ್ದೇನೆ. ಮುಂದೆ ಯೋಗದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಆಸೆ ಇದೆ’ ಎಂದು ಹೇಳಿದಳು.

ಬಾಲಕಿ ಸಿಂಚನಾ ತಾಯಿ ರೇಣುಕಾ ಹಾಗೂ ತಂದೆ ಕೀರ್ತಿಕುಮಾರ್
ಯೋಗಾಸನ ಮಾಡುವುದರಲ್ಲಿ ನಿರತಳಾದ ಸಿಂಚನಾ
ಕಠಿಣ ಯೋಗಾಸನ ಮಾಡುವುದರಲ್ಲಿ ನಿರತಳಾದ ಸಿಂಚನಾ
ಕಠಿಣ ಯೋಗಾಸನ ಮಾಡುವುದರಲ್ಲಿ ನಿರತಳಾದ ಸಿಂಚನಾ
ಕಠಿಣ ಯೋಗಾಸನ ಮಾಡುವುದರಲ್ಲಿ ನಿರತಳಾದ ಸಿಂಚನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.