ಮಡಿಕೇರಿ: ಹೃದಯಾಘಾತವಾದಾಗ ತಕ್ಷಣ ಏನು ಮಾಡಬೇಕು, ಹಾವು ಕಚ್ಚಿದಾಗ ಮೊದಲು ಮಾಡಬೇಕಾದ್ದು ಏನು? ಅಪಘಾತ ಸಂಭವಿಸಿದಾಗ ಏನು ಮಾಡಬೇಕು...
ಹೀಗೆ ಅನೇಕ ಪ್ರಶ್ನೆಗಳಿಗೆ ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮೈಸೂರಿನ ಮಣಿಪಾಲ ಆಸ್ಪತ್ರೆ, ರೋಟರಿ ಮಡಿಕೇರಿ ಹಾಗೂ ಕಾಲೇಜಿನ ಐಕ್ಯೂಎಸಿ, ರೆಡ್‌ಕ್ರಾಸ್ ಎನ್‌ಸಿಸಿ, ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ನಡೆದ ಪ್ರಥಮ ಚಿಕಿತ್ಸಾ ಕಾರ್ಯಾಗಾರದಲ್ಲಿ ಉತ್ತರ ದೊರೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದ ಮಣಿಪಾಲ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ರಾಜಣ್ಣ ಅವರು ಪ್ರಾಯೋಗಿಕವಾಗಿ ಪ್ರಥಮ ಚಿಕಿತ್ಸಾ ವಿಧಾನದ ವಿವಿಧ ಆಯಾಮಗಳನ್ನು ತಿಳಿಸಿಕೊಟ್ಟರು.
ಅಪಘಾತ, ಹೃದಯಾಘಾತ, ಪ್ರಕೃತಿ ವಿಕೋಪ, ಪ್ರಾಣಿ, ಸರೀಸೃಪದಿಂದ ಉಂಟಾಗುವ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಮಾದರಿಗಳ ಕುರಿತು ಉದಾಹರಣೆ ಸಹಿತ ಎರಡು ಹಂತದ ಪ್ರಾಯೋಗಿಕ ತರಗತಿಗಳನ್ನು ನಡೆಸಿಕೊಟ್ಟರು. ಇದನ್ನು ಕಂಡ ನೂರಾರು ವಿದ್ಯಾರ್ಥಿಗಳು ಕಾರ್ಯಾಗಾರ ಹೊಸ ವಿಚಾರಗಳನ್ನು ಕಲಿಸಿಕೊಟ್ಟಿತು ಎಂದು ಪ್ರತಿಕ್ರಿಯಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಡಿಕೇರಿ ರೋಟರಿಯ ಅಧ್ಯಕ್ಷರಾದ ಎನ್.ಡಿ.ಅಚ್ಚಯ್ಯ, ‘ಧನಾತ್ಮಕವಾಗಿ ಯೋಚಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಯ ಹಾಳು ಮಾಡಬೇಡಿ. ವೈಯಕ್ತಿಕ ಸಾಮರ್ಥ್ಯವನ್ನು ರೂಪಿಸಿಕೊಳ್ಳಬೇಕು. ತರಬೇತಿಯ ಮೂಲಕ ರಾಷ್ಟ್ರೀಯ ಭದ್ರತಾ ಸೇವೆಗೆ ಸೇರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ ಅವರು ಮಾತನಾಡಿ, ‘ಈ ಬಗೆಯ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಕೌಶಲ್ಯವನ್ನು ಕಲಿಸಿಕೊಡುತ್ತವೆ. ಸೃಜನಾತ್ಮಕ ಅಂಶಗಳನ್ನು ಕಲಿಸಿಕೊಡುತ್ತವೆ. ಈ ಕೌಶಲ್ಯವನ್ನು ಬಳಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಬೇಕು. ಆಗಿದ್ದಾಗ ಮಾತ್ರ ಸತ್ತ ಮೇಲೆ ಸಾಮಾಜಿಕ ವ್ಯವಸ್ಥೆಯಲ್ಲಿ ನೆನಪಿನಲ್ಲಿ ಉಳಿಯಲು ಸಾಧ್ಯ’ ಎಂದು ಹೇಳಿದರು.
ಇದೇ ವೇಳೆ 19ನೇ ಕರ್ನಾಟಕ ಬಟಾಲಿಯನ್ ಎನ್‌ಸಿಸಿಯ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚಾಕೋ ವಿ.ಡಿ. ಅವರನ್ನು ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಮಹತ್ವ ತಿಳಿಸಿದರು.
ಐಕ್ಯೂಎಸಿ ಸಂಯೋಜಕ ಡಾ.ಆರ್.ರಾಜೇಂದ್ರ,ಪ್ರಾಧ್ಯಾಪಕ ಅಲೋಕ್ ಬಿಜೈ, ಉಪನ್ಯಾಸಕ ಡಾ.ಕೆ.ಎಚ್.ಮುಸ್ತಾಫ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.